ADVERTISEMENT

ಕೊರೊನಣ್ಣನ ಚೇಲಾಗಳು

ಸುಮಂಗಲಾ
Published 19 ಜುಲೈ 2020, 19:30 IST
Last Updated 19 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಣ್ಣನಿಗೆ ದೇಶದಾದ್ಯಂತ ಹರಡಿರುವ ಚಿಳ್ಳೆಪಿಳ್ಳೆ ಚೇಲಾ ಕೊರೊನಾಗಳು ತಾವು ದಾಳಿ ಮಾಡಿದ ಜನರ ಅಂಕಿಸಂಖ್ಯೆಯೊಂದಿಗೆ,
ಅದರಲ್ಲಿ ದೊಡ್ಡಕುಳಗಳೆಷ್ಟು ಎಂದು ವಾರಕ್ಕೊಮ್ಮೆ ವರದಿ ಕೊಡುತ್ತಿದ್ದವು.

ಕಳೆದ ವಾರ ಬಿಗ್ ಬಿ ಬಚ್ಚನ್ ಬಂಗಲೆಯ ಕಾಂಪೌಂಡ್ ಹಾರಿ ಒಳಹೋಗಿದ್ದ ಕತೆಯನ್ನು ಮರಿ ಕೊರೊನಾ ವರ್ಣಿಸಲಾರಂಭಿಸುತ್ತಿದ್ದಂತೆ, ಕೊರೊನಣ್ಣ ಥೇಟ್ ಶೋಲೆಯ ಗಬ್ಬರ್ ಸಿಂಗ್ ಧ್ವನಿಯಲ್ಲಿ ‘ಕಿತನೇ ಆದ್ಮೀ ಥೆ’ ಎಂದು ಕೇಳಿತು. ಮರಿ ಕೊರೊನಾ ‘ನಾಲ್ಕು’ ಎಂದಿತು. ತುಸು ಯೋಚಿಸಿದ ಕೊರೊನಣ್ಣ, ‘ಸರಿ, ಸುಮ್ಮನೆ ತಡವಿ ಬಾ ಸಾಕು, ಏನರ ಹೆಚ್ಚುಕಡಿಮೆ ಮಾಡಬ್ಯಾಡ, ಅವರ ಅಭಿಮಾನಿಗಳ ರೋಷ ಹೆಚ್ಚಾದ್ರೆ ಕಷ್ಟ’ ಎಂದು ಖಡಕ್ಕಾಗಿ ಹೇಳಿತು.

ಕರುನಾಡಿನ ಕೊರೊನಾ ಚಿಳ್ಳೆಗಳು ಆರೋಗ್ಯ ಸಚಿವರ ಮನೆಯವರನ್ನೂ ಬಿಡದೆ, ಹಲವಾರು ಶಾಸಕ, ಮಂತ್ರಿಗಳನ್ನು ಬಲೆಗೆ ಕೆಡವಿದ್ದನ್ನು ರಸವತ್ತಾಗಿ ವರ್ಣಿಸಿದವು. ಲಾಕ್‌ಡೌನು, ಸೀಲ್‌ಡೌನು, ಏನೇ ಆದರೂ ನಮ್ಮ ಪ್ರಭಾವ ಡೌನಾಗಿಲ್ಲ, ಗ್ರಾಫು ಏರುಗತಿಯಲ್ಲಿಯೇ ಸಾಗಿದೆ ಎಂದು ಕೊಚ್ಚಿಕೊಂಡವು.

ADVERTISEMENT

‘ಅದ್ರಲ್ಲಿ ನಿಮ್ಮದೇನು ಹೆಚ್ಚುಗಾರಿಕೆ? ಸರ್ಕಾರ, ಕೊರೊನಾ ವಾರಿಯರ್ಸ್ ಏನೇ ಪ್ರಯತ್ನ ಮಾಡಿದ್ರೂ, ಹೊರಗೆ ಓಡಾಡ್ತಿರೋ ಜನರ ಸಾಧನೆ ಅದು’ ಕೊರೊನಣ್ಣ ವಾದಿಸಿತು.

ಆಂಧ್ರದ ಮರಿಪಿಳ್ಳೆಯೊಂದು, ತಿರುಪತಿ ದೇಗುಲದ ಹತ್ತಾರು ಶಾಸ್ತ್ರಿಗಳನ್ನೇ ಬಲೆಗೆ ಕೆಡವಿದೆನೆಂದು ವರ್ಣಿಸಿತು. ‘ದೀವಾರ್’ ಸಿನಿಮಾದಲ್ಲಿ ಶಶಿಕಪೂರ್ ‘ಮೇರೆ ಪಾಸ್ ಮಾ ಹೈ’ ಎನ್ನುವಂತೆ ‘ಮೇರೆ ಪಾಸ್ ತಿರುಪತಿ ತಿಮ್ಮಪ್ಪ ಹೈ’ ಎಂದು ನಕ್ಕಿತು.

ಪುಣೇಕರ್ ಕೊರೊನಾ ಚಿಳ್ಳೆಯೊಂದು, ಅಪಾಯಕಾರಿ ದೇಶದ್ರೋಹಿ ಅಂದರೆ ಹೆಂಗಿರ್ತಾರೆಂದು ನೋಡಲು ಜೈಲಿನಲ್ಲಿಟ್ಟಿದ್ದ ವರವರರಾವ್ ಹತ್ತಿರ ಹೋದೆ ಎಂದಿತು.

‘ಅಲ್ಲಲೇ... ತನ್ನ ವಿರುದ್ಧ ಸೊಲ್ಲೆತ್ತಿದವರನ್ನ ಎರಡ್ ವರ್ಷದಿಂದ ವಿಚಾರಣೆಯೂ ಇಲ್ಲದೆ ಜೈಲಲ್ಲಿ ಇಟ್ಟು, ಅವ್ರ ವಿರುದ್ಧ ಸೇಡು ತೀರಿಸಿಕೊಳ್ಳಾಕೆ, ಅಟ್ಯಾಕ್ ಮಾಡಾಕೆ ಸರ್ಕಾರ ಐತೆ. ನೀನ್ಯಾಕೆ ಹೋದೆ’ ಎಂದು ಕೊರೊನಣ್ಣಬೈದ ರಭಸಕ್ಕೆ ಚಿಳ್ಳೆ ಥರಗುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.