ADVERTISEMENT

ಚುರುಮುರಿ | ಪಿತ್ರಾರ್ಜಿತ ಪ್ರೀತಿ!

ಬಿ.ಎನ್.ಮಲ್ಲೇಶ್
Published 13 ಆಗಸ್ಟ್ 2020, 20:17 IST
Last Updated 13 ಆಗಸ್ಟ್ 2020, 20:17 IST
   

‘ಏಯ್ ಪಮ್ಮಿ ಡಿಯರ್, ಬೆಳಗ್ಗಿಂದ ಒಬ್ಳೇ ಎಷ್ಟ್ ಕೆಲ್ಸ ಮಾಡ್ತೀಯ... ಯಾರಾದ್ರೂ ಕೆಲ್ಸದೋರ‍್ನ ಇಟ್ಕೋಬಾರ್ದಾ?’ ಗಂಡ ತೆಪರೇಸಿಯ ದಿಢೀರ್ ಪ್ರೀತಿಯ ಮಾತಿಗೆ ಬೆರಗಾದ ಪಮ್ಮಿ ‘ಏನ್ರಿ, ಏನ್ಸಮಾಚಾರ? ಬಾಳ ಪ್ರೀತಿ ತೋರಿಸ್ತಿದೀರಿ?’ ಎಂದಳು.

‘ಅಲ್ಲ, ಪಾಪ ಮದುವಿ ಆದಾಗಿನಿಂದ ನೋಡ್ತಿದೀನಿ. ಸ್ವಲ್ಪ ಸಿಡುಕಿ, ಹಟಮಾರಿ ಅನ್ನೋದು ಬಿಟ್ರೆ ಮನೆ ತೂಗಿಸೋಕೆ ಎಷ್ಟು ಕಷ್ಟ ಪಡ್ತಿದೀಯ. ನಿನ್ನ ಸುಖವಾಗಿ ಇಡೋಕೆ ನಾನೂ ಪ್ರಯತ್ನಪಡ್ತಿದೀನಿ, ಆದ್ರೆ ಆಗ್ತಿಲ್ಲ...’

‘ಇರ‍್ಲಿ ಬಿಡ್ರಿ, ನಮ್ ಹಣೇಲಿ ಬರೆದಿದ್ದೇ ಇಷ್ಟು. ನೀವು ಸ್ವಲ್ಪ ಜಿಪುಣ ಅನ್ನೋದು ಬಿಟ್ರೆ ತುಂಬ ಒಳ್ಳೇರು. ಪರನಾರಿ ಸಹೋದರ, ಪರಧನ ಪಾಷಾಣ ಅನ್ನಂಗೆ ಬದುಕ್ತಿದೀರ...’ ಪಮ್ಮಿ ನಕ್ಕಳು.

ADVERTISEMENT

‘ಒಂದು ಸ್ವಂತ ಕಾರು ತಗೊಂಡು ನಿನ್ನ ಒಳ್ಳೊಳ್ಳೆ ಜಾಗಕ್ಕೆ ಕರ್ಕಂಡ್ ಹೋಗಬೇಕು, ಜೀವನದಲ್ಲಿ ಒಂದ್ಸಲ ನಿನ್ ಜೊತೆ ಫಾರಿನ್ ಟೂರ್ ಮಾಡಬೇಕು ಅಂತ ಆಸೆ ನಂಗೆ...’

‘ನೀವೊಳ್ಳೆ, ಈ ಕೊರೊನಾ ಕಾಲದಲ್ಲಿ ಯಾವ ಟೂರೂ ಬ್ಯಾಡ ಸುಮ್ನಿರಿ...’

‘ಪಮ್ಮಿ, ಇವತ್ ಪೇಪರ್ ನೋಡಿದ್ಯಾ? ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತೀಲಿ ಸಮಪಾಲು ಸಿಗುತ್ತಂತೆ...’ ತೆಪರೇಸಿ ಮೆಲ್ಲಗೆ ರಾಗ ಎಳೆದ.

ಪಮ್ಮಿಗೆ ಅರ್ಥವಾಗಿ ಹೋಯಿತು. ‘ಹೌದಂತೆರೀ, ಅಣ್ಣ ಫೋನ್ ಮಾಡಿದ್ದ. ನಂಗೆ ಯಾವ ಪಿತ್ರಾರ್ಜಿತ ಆಸ್ತಿನೂ ಬೇಡಪ್ಪ. ನಮ್ಮನೆಯೋರು ಅದನ್ನೆಲ್ಲ ತಗಳ್ಳಲ್ಲ, ಬೈತಾರೆ ಅಂತ ಹೇಳಿಬಿಟ್ಟೆ’ ಎಂದಳು.

‘ಹೌದಾ? ಥೂ ನಿನ್ನ, ನಿನ್ನ ಕಟ್ಕಂಡು ಹಾಳಾಗಿ ಹೋದೆ. ನನ್ ಪ್ಲಾನೆಲ್ಲ ಹಾಳಾಗಿ ಹೋಯ್ತು...’ ಕೈಲಿದ್ದ ಪೇಪರ್ ಬಿಸಾಕಿ ಕಿಡಿಕಿಡಿಯಾಗಿ ಎದ್ದು ಹೋದ ತೆಪರೇಸಿ. ಪಮ್ಮಿ ಒಳಗೇ ನಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.