‘ಸರೋಜಳ ಮಗ ಡ್ರಗ್ಸ್ ದಾಸನಾಗಿದ್ದಾನಂತೆ...’ ಸುಮಿ ಶಾಕಿಂಗ್ ಸುದ್ದಿ ಹೇಳಿದಳು.
‘ಹೌದಾ?! ಛೇ...! ಈ ವಿಷಯ ಟೀವಿ ಚಾನೆಲ್‍ನವರಿಗೆ ಗೊತ್ತಾದರೆ ಜನ್ಮ ಜಾಲಾಡಿಸಿ
ಬಿಡ್ತಾರೆ’ ಅಂದ ಶಂಕ್ರಿ.
‘ಮೊನ್ನೆಮೊನ್ನೆವರೆಗೂ ಅವಳ ಮಗ ಐಸ್‍ಕ್ರೀಂ, ಚಾಕೊಲೇಟ್ ಚೀಪುತ್ತಿದ್ದ, ಆಗಲೇ ಡ್ರಗ್ಸ್ ತಗೊಳ್ಳೋವಷ್ಟು ದೊಡ್ಡವನಾಗಿಬಿಟ್ಟನೇ?!’
‘ಈಗಿನ ಮಕ್ಕಳೇ ಹಾಗೆ, ನೋಡುನೋಡುತ್ತಲೇ ಬೆಳೆದುಬಿಡ್ತಾರೆ’.
‘ಬೇಕಾದ್ರೆ ಮಣ್ಣು ತಿಂದು ಬೆಳೆಯಲಿ, ಡ್ರಗ್ಸ್ ತಿಂದುಕೊಂಡು ಬೆಳೆಯಬಾರದೂರೀ, ವಯಸ್ಸಿನ ಮಕ್ಕಳೆಲ್ಲಾ ಹೀಗೆ ಔಟಾಫ್ ಸಿಲೆಬಸ್ ಕಲಿತುಬಿಟ್ಟರೆ ಗತಿ ಏನ್ರೀ?’
‘ಫಿಸಿಕ್ಸ್, ಕೆಮಿಸ್ಟ್ರಿ, ಹಿಸ್ಟರಿ, ಎಕನಾಮಿಕ್ಸ್‌ಗಿಂತಲೂ ಡ್ರಗ್ಸ್ ಸಿಲೆಬಸ್ ಈಸಿ ಇರುತ್ತದೇನೋ ಮಕ್ಕಳು ಸುಲಭವಾಗಿ ಕಲಿತುಬಿಡ್ತಾರೆ ಅಲ್ವಾ?’
‘ಕಾಲೇಜು ಕ್ಯಾಂಪಸ್‍ಗೆ ಎತ್ತರದ ಕಾಂಪೌಂಡ್ ಕಟ್ಟಿ ಮಕ್ಕಳನ್ನು ರಕ್ಷಣೆ ಮಾಡಬೇಕು’.
‘ಕಾಂಪೌಂಡ್ ಹಾರುವವರನ್ನು ಕಾಲೇಜಿನವರು ಕಂಟ್ರೋಲ್ ಮಾಡೋದು ಕಷ್ಟ, ಮಕ್ಕಳು ಕೆಡದಂತೆ ಪೋಷಕರೇ ಕೇರ್ ಮಾಡಬೇಕು ಅಂತ ಮಂತ್ರಿಗಳೇ ಹೇಳಿದ್ದಾರಲ್ಲ’.
‘ಹಣ್ಣು, ತರಕಾರಿ ಕೆಡಬಾರದು ಅಂತ ಫ್ರಿಜ್‍ನಲ್ಲಿ ಇಡಬಹುದು, ಮಕ್ಕಳನ್ನು ಫ್ರಿಜ್‍ನಲ್ಲಿ ಇಟ್ಟು ಬೆಳೆಸಲಾಗುತ್ತೇನ್ರೀ? ಅವರು ಹೊರಗೆ ಹೋಗಿ ಸಮಾಜ ತಿಳಿಯೋದು ಬೇಡ್ವಾ?’
‘ಅದೂ ನಿಜವೇ, ಮಕ್ಕಳನ್ನು ಪಂಜರದಲ್ಲಿಟ್ಟು ಸಾಕಲು ಆಗುವುದಿಲ್ಲ’.
‘ಹೊರ ಹೋಗುವಾಗ ಮಕ್ಕಳಿಗೆ ಸ್ಯಾನಿಟೈಸರ್‌ನಲ್ಲಿ ಕೈ ತೊಳೆಸಿ, ಮಾಸ್ಕ್ ಹಾಕಿ, ದುಷ್ಟರಿಂದ ಅಂತರ ಕಾಪಾಡಿಕೊಳ್ಳಿ ಅಂತ ಬುದ್ಧಿ ಹೇಳಬಹುದು, ಅವರು ಪಾಲಿಸಬೇಕಲ್ಲ’.
‘ಕೊರೊನಾ ಅಂಟಿಸಿಕೊಂಡು ಬಂದ್ರೆ ಕ್ವಾರಂಟೈನ್ ಮಾಡಬಹುದು, ಡ್ರಗ್ಸ್ ಚಟ ಅಂಟಿಸಿಕೊಂಡರೆ ಏನು ಮಾಡೋದು? ಸಂಗದಿಂದ ಸನ್ಯಾಸಿನೇ ಕೆಡ್ತಾನಂತೆ, ಮಕ್ಕಳು ಕೆಡದೇ ಇರುತ್ತವಾ...’
‘ಕೋವಿಡ್ ಕಾಯಿಲೆಗೆ ಇನ್ನೂ ಡ್ರಗ್ ಕಂಡು ಹಿಡಿಯಲಿಲ್ಲ, ಮನೆಹಾಳು ಡ್ರಗ್ಸ್ ಚಟದ ನಿವಾರಣೆಗೆ ಸರ್ಕಾರ ಡ್ರಗ್ ಕಂಡುಹಿಡಿದು ಮಕ್ಕಳನ್ನು ಕಾಪಾಡಬೇಕೂರೀ...’ ಸುಮಿ ಕಳವಳಗೊಂಡಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.