‘ನಿನ್ನ ವೋಟ್ ಯಾವುದಕ್ಕೆ, ಇವಿಎಂ ಮೆಷಿನ್ನಿಗೋ ಬ್ಯಾಲೆಟ್ ಪೇಪರ್‌ಗೋ?’ ಶಂಕ್ರಿ ಕೇಳಿದ.
‘ಮೆಷಿನ್‌ನಲ್ಲಿ ಬಟನ್ ಒತ್ತಬೇಕು, ಮತಪತ್ರದಲ್ಲಿ ಮುದ್ರೆ ಒತ್ತಬೇಕು. ಯಾವುದಕ್ಕೆ ಒತ್ತಿದರೂ ನಮ್ಮ ಮತಮೌಲ್ಯ ವ್ಯತ್ಯಾಸವಾಗುವುದಿಲ್ಲ’ ಅಂದಳು ಸುಮಿ.
‘ಕಾಂಗ್ರೆಸ್‌ನವರಿಗೆ ಮತಯಂತ್ರದ ಬಗ್ಗೆ ವಿಶ್ವಾಸವಿಲ್ಲವಂತೆ. ಆ ಯಂತ್ರದೊಳಗೆ ಮಾಯಾಮಂತ್ರ ಅಡಗಿದೆ ಅನ್ನೋ ಅನುಮಾನವಂತೆ’.
‘ಮತಪತ್ರದಲ್ಲಿ ಮುದ್ರೆ ಒತ್ತಿ ಅಭ್ಯರ್ಥಿ ಹೆಸರಿಗೆ ಮಸಿ ಬಳಿಯುವ ಪದ್ಧತಿ ಬೇಡ ಎನ್ನುವುದು ಬಿಜೆಪಿಯವರ ವಾದ’.
‘ಯಾವ ಪದ್ಧತಿ ಮಾಡಿದರೂ ಮತದಾರರು ಬೆರಳಿಗೆ ಮಸಿ ಬಳಿಸಿಕೊಳ್ಳುವುದು ಬದಲಾಗುವುದಿಲ್ಲ’.
‘ಮತಯಂತ್ರ ಬೇಕೊ, ಮತಪತ್ರ ಬೇಕೊ? ಎಂದು ಮತ ಚಲಾಯಿಸುವ ಮತದಾರರ ಅಭಿಮತ ಕೇಳಬೇಕಲ್ವೇನ್ರೀ?’
‘ಹಾಗಂತ, ಮತಯಂತ್ರ ವರ್ಸಸ್ ಮತಪತ್ರದ ಚುನಾವಣೆ ನಡೆಸಿ, ಮತದಾರರ ಬಹುಮತದ ಅಭಿಪ್ರಾಯ ಕೇಳುವ ಪರಿಸ್ಥಿತಿ ಇಲ್ಲ. ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ. ಚುನಾವಣೆಗಳು ಮತದಾರರಿಗಿಂಥಾ ರಾಜಕೀಯ ಪಕ್ಷಗಳಿಗೆ ಮುಖ್ಯ’.
‘ನಮ್ಮ ಮಕ್ಕಳು ಪರೀಕ್ಷೆಗಳಲ್ಲಿ ಎಬೋ ನೈಂಟಿ ಪರ್ಸೆಂಟ್ ತಗೊಳ್ತಾರೆ, ಚುನಾವಣೆಗಳಲ್ಲಿ ನಮ್ಮ ಮತ ಪ್ರಮಾಣ 50–60 ಪರ್ಸೆಂಟ್ ಆದ್ರೆ ಹೆಚ್ಚು. ಪರೀಕ್ಷೆಗಳಲ್ಲಿ ಕಾಪಿ ಮಾಡುವವರನ್ನು ಡಿಬಾರ್ ಮಾಡುವಂತೆ ಚುನಾವಣೆಗಳಲ್ಲಿ ದುಡ್ಡು ಹಂಚುವವರು, ಈಸ್ಕೊಳ್ಳುವವರ ವಿರುದ್ಧ ಕ್ರಮವಾದರೆ ಚುನಾವಣೆಗಳು ಶಿಸ್ತಿನಿಂದ ನಡೆಯಬಹುದು’.
‘ಹಾಗೆಲ್ಲಾ ಸ್ಟ್ರಿಕ್ಟ್ ಮಾಡಿದರೆ ಪೋಲಿಂಗ್ ಪರ್ಸೆಂಟೇಜ್ ಇನ್ನೂ ಕುಸಿದು ಚುನಾವಣೆಗಳು ಫೇಲ್ ಆಗಿಬಿಡಬಹುದು ಅನ್ನೋ ಆತಂಕ ಅಭ್ಯರ್ಥಿಗಳನ್ನು ಕಾಡಬಹುದು!’
‘ವಿದ್ಯಾರ್ಥಿಗಳ ಹಾಜರಾತಿ ಕೊರತೆ ಎಂದು ಸರ್ಕಾರಿ ಶಾಲೆ ಮುಚ್ಚುತ್ತಾರಲ್ಲ, ಹಾಗೇ ಮತಗಟ್ಟೆಗಳನ್ನೂ ಮುಚ್ಚುವ ಪರಿಸ್ಥಿತಿ ಬರಬಹುದು ಕಣ್ರೀ!’
‘ಹಾಗೇನೂ ಆಗೋದಿಲ್ಲ, ಸರ್ಕಾರಿ ಶಾಲೆಗಳನ್ನು ಮುಚ್ಚಿದರೂ ಶಾಲಾ ಕಟ್ಟಡಗಳು ಮತಗಟ್ಟೆಗಳಾಗಿ ಉಳಿಯುತ್ತವೆ. ನಮ್ಮಲ್ಲಿ ಚುನಾವಣೆಗಳಿಗೆ ಮಹತ್ವ ಜಾಸ್ತಿ...’ ಅಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.