ಫಾರಿನ್‍ಗೆ ಬಾ ಎಂದು ಶಂಕ್ರಿಗೆ ಅಲ್ಲಿನ ಗೆಳೆಯ ಹಲವಾರು ಬಾರಿ ಆಹ್ವಾನ ಕೊಟ್ಟಿದ್ದ. ಕೊರೊನಾ ಕಥೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದವನು ಈಗ ಹೋಗಿಬರಲು ಸಿದ್ಧನಾಗಿದ್ದ.
‘ಬೆಂಗಳೂರಿಗೆ ಹೋದರೇ ನೀವು ದಾರಿ ತಪ್ಪುತ್ತೀರಿ, ಫಾರಿನ್‍ಗೆ ಹೋದ್ರೆ ದಿಕ್ಕು ತಪ್ಪದೇ ಇರ್ತೀರಾ? ನಾನೂ ನಿಮ್ಮ ಜೊತೆ ಬಂದು ದಾರಿ ತೋರಿಸ್ತೀನಿ’ ಎಂದಳು ಸುಮಿ.
‘ದೇಶಾಂತರ ಹೋಗ್ತೀನಿ ಅಂದ್ರೂ ಬೆನ್ನಿಗೆ ಬೀಳ್ತಿಯಲ್ಲ’ ಶಂಕ್ರಿಗೆ ಸಿಟ್ಟು.
‘ಫಾರಿನ್‍ನಲ್ಲಿ ಕಮ್ಮಿ ರೇಟಿಗೆ ಬಟ್ಟೆ ಸಿಗ್ತವಂತೆ, ಹಬ್ಬಕ್ಕೆ ನನಗೊಂದು ಸೀರೆ, ನಿಮಗೊಂದು ಪಂಚೆ ತಗೊಂಡು ಬರೋಣ’.
‘ಫಾರಿನ್‍ನವರು ಸೀರೆ, ಪಂಚೆಗಳನ್ನು ಉಡುವುದೂ ಇಲ್ಲ, ನೇಯುವುದೂ ಇಲ್ಲ’.
‘ಅಯ್ಯೋ ಬಿಡ್ರೀ, ಚೆಡ್ಡಿನಾದ್ರೂ ತರೋಣ’ ಸುಮಿಗೂ ಸಿಟ್ಟು.
‘ನಾವೂ ಫಾರಿನ್‍ಗೆ ಬರ್ತೀವಿ, ಒಂದು ದಿನವೂ ಫಾರಿನ್ ನೋಡಿಲ್ಲ’ ಮಕ್ಕಳು ಹಟ ಮಾಡಿದರು.
‘ಸುಮ್ನಿರಿ, ಫಾರಿನ್ ಅಂದ್ರೆ ಪಾನಿಪುರಿ ಅಂಗಡಿ ಅಲ್ಲ’ ಸುಮಿ ಗದರಿದಳು.
‘ನನ್ನನ್ನೂ ಫಾರಿನ್‍ಗೆ ಕರಕೊಂಡು ಹೋಗೋ. ಫಾರಿನ್ ಎತ್ತಕಡೆ ಇದೆ ಅಂತಲೂ ಗೊತ್ತಿಲ್ಲ’ ಅಮ್ಮ ಆಸೆಪಟ್ಟಳು.
‘ಫಾರಿನ್‍ಗೆ ಹೋಗೋದು ಅಂದ್ರೆ, ಬಸ್ ಹತ್ತಿಕೊಂಡು ಹೋದಂತೆ ಅಲ್ಲ, ಏರೋ
ಪ್ಲೇನ್‍ನಲ್ಲಿ ಹಾರಬೇಕು, ನಿನಗೆ ತಲೆ ತಿರುಗುತ್ತದೆ ಸುಮ್ನಿರು’.
‘ಕೆಎಸ್‍ಆರ್‌ಟಿಸಿ ಬಸ್ ರೀತಿ ಏರೋಪ್ಲೇನ್‍ನಲ್ಲಿ ಸ್ಟೂಡೆಂಟ್ ಪಾಸ್, ಮಕ್ಕಳನ್ನು ಸೀಟ್ ಮೇಲೆ ಕೂರಿಸಿದ್ರೆ ಹಾಫ್ ಟಿಕೆಟ್, ಕಂಕುಳಲ್ಲಿ ಎತ್ತಿಕೊಂಡ್ರೆ ಫ್ರೀ ಟಿಕೆಟ್ ಸೌಕರ್ಯ ಇಲ್ವೇನೋ?’ ಕೇಳಿದಳು ಅಮ್ಮ.
‘ಹ್ಞೂಂ, ಫುಟ್‍ಬೋರ್ಡ್, ಟಾಪ್‍ನಲ್ಲೂ ಕೂರಿಸಿಕೊಂಡು ಹೋಗ್ತಾರೆ...’ ಎನ್ನುತ್ತಿದ್ದಂತೆ ಶಂಕ್ರಿ ಮೊಬೈಲ್ ರಿಂಗ್ ಆಯ್ತು. ರಿಸೀವ್ ಮಾಡಿ ಮಾತನಾಡಿದ ಶಂಕ್ರಿ ಮಂಕಾದ.
‘ಫಾರಿನ್ ಫ್ರೆಂಡ್ ಫೋನ್ ಮಾಡಿದ್ದ. ಅವನನ್ನು ಕೆಲಸದಿಂದ ತೆಗೆದುಹಾಕಿದ್ದಾರಂತೆ. ಇಂಡಿಯಾದಲ್ಲಿ ಅವನಿಗೊಂದು ಕೆಲಸ ನೋಡಬೇಕಂತೆ...’ ಅಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.