‘ಬೆಳೆದಿದೆ ನೋಡ ಬೆಂಗಳೂರು ನಗರ…’ ದಶಕಗಳ ಹಿಂದಿನ ಹಳೆಯ ಸಿನಿಮಾ ಹಾಡು ಗುನುಗುತ್ತ ಬಂದರು ಜಿಬಿಎ ಅಧಿಕಾರಿ ವಿಜಿ.
‘ತುಂಬಾ ದಿನಗಳಾಯ್ತು ಸಾರ್, ಆಫೀಸ್ ಹತ್ತಿರ ಕಾಣಲೇ ಇಲ್ಲ ನೀವು’ ಎಂದ ಟೀ ಅಂಗಡಿ ಮಾಲೀಕ ಮುದ್ದಣ್ಣ.
‘ಕೆಲಸ ಮುದ್ದಣ್ಣ ಕೆಲಸ, ಬಿಡುವೇ ಇಲ್ಲ’.
‘ತುಂಬಾ ಕೆಲಸ ಅಂತೀರಿ, ಆದರೆ, ಆಫೀಸಲ್ಲೇ ಇರಲ್ಲ ನೀವು. ಜನ ಮಾತ್ರ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿ ನಿಮಗೆ ಮತ್ತು ಸರ್ಕಾರಕ್ಕೆ ಶಾಪ ಹಾಕಿ ಹೋಗ್ತಿದ್ದಾರೆ’ ಹೆದರುತ್ತಲೇ ಹೇಳಿದ ಮುದ್ದಣ್ಣ.
‘ನಾವೇನ್ ಮಾಡ್ತಿದೀವಿ ನಮಗೇ ಗೊತ್ತಾಗ್ತಿಲ್ಲ, ಇನ್ನು ನಿನಗೇನ್ ಗೊತ್ತಾಗುತ್ತೆ ಹೇಳು’.
‘ಬಿ ಖಾತಾದಲ್ಲಿ ಮನೆ ಕಟ್ಟೋರಿಗೆ ವಿದ್ಯುತ್, ನೀರು ಕೊಡ್ತಿಲ್ವಂತಲ್ಲ ಸರ್ ನೀವು. ‘ಒಸಿ’ ಬೇಡ ಅಂತ
ಪೇಪರ್‌ನಲ್ಲಿ ಬರುತ್ತೆ, ಆದರೆ ನಕ್ಷೆ ಬೇಕು ಅಂತ ನಿಮ್ಮ ಸಿಬ್ಬಂದಿ ಕೇಳ್ತಾರೆ, ಜನ ಏನ್ ಮಾಡಬೇಕು’.
‘ನೋಡು, ಪೇಪರ್‌ನಲ್ಲಿ ಬರಲಿ ಅಂತ ಮಿನಿಸ್ಟರ್ ಸಾಹೇಬ್ರು ಏನೋ ಹೇಳಿರ್ತಾರೆ, ಒಳಗಡೆ ಬೇರೆಯೇ ಇರುತ್ತೆ, ಕೆಲಸ ಆಗ್ತಿದೆ ಅಂತ ಅನಿಸಬೇಕು, ಆದರೆ ಕೆಲಸ ಆಗಬಾರದು ಅಷ್ಟೇ’ ಮಾರ್ಮಿಕವಾಗಿ ಹೇಳಿದರು ಆಫೀಸರ್.
‘ಈಗ ಜಿಬಿಎ ಕೆಲಸಗಳಾದರೂ ಆಗ್ತಿವೆಯಾ ಸರ್’.
‘ಇಲ್ಲ. ನಮ್ಮ ಸಿಬ್ಬಂದಿ ಎಲ್ಲ ಈಗ ಜಾತಿ ಸಮೀಕ್ಷೆಯಲ್ಲಿ ಬ್ಯುಸಿ ಇದ್ದಾರೆ’.
‘ಸಮೀಕ್ಷೆನಾದರೂ ಸರಿಯಾಗಿ ಆಗ್ತಿದೆಯಾ ಸರ್’.
‘ನೀನೇನಯ್ಯಾ ಒಳ್ಳೆ ಇ.ಡಿ. ಆಫೀಸರ್ ಥರ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತೀಯ, ಒಂದ್ ಟೀ ಕೊಡು, ನಾನು ಹೊರಡಬೇಕು’.
‘ಎಲ್ಲಿಗೆ ಸರ್?’
‘ಲಾಲ್‌ಬಾಗ್‌ಗೆ ಹೋಗಬೇಕು ಕಣಯ್ಯ. ಅಲ್ಲಿ ಸುರಂಗ ಕೊರೆದು ದಶಪಥ ರಸ್ತೆ ಮಾಡೋದಕ್ಕೆ ಎಷ್ಟು ಸಾವಿರ ಕೋಟಿ ಬೇಕಾಗುತ್ತೆ ಅಂತ ರಿಪೋರ್ಟ್ ಕೊಡೋದಕ್ಕೆ ಹೇಳಿದ್ದಾರೆ ಮಿನಿಸ್ಟರ್ ಸಾಹೇಬ್ರು’ ಎಂದು ಟೀ ಹೀರಿ ಹೊರಟರು ಆಫೀಸರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.