ADVERTISEMENT

ಚುರುಮುರಿ: ಗನ್‌ಮನ್‌ ಖದರು

ಚಂದ್ರಕಾಂತ ವಡ್ಡು
Published 13 ಏಪ್ರಿಲ್ 2022, 17:44 IST
Last Updated 13 ಏಪ್ರಿಲ್ 2022, 17:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅಯ್ಯೋ…! ಶುಗರ್ ಮುನ್ನೂರಾ ಹನ್ನೆರಡು ಆಗಿದೆಯಾ? ಉತ್ತರಪ್ರದೇಶದಲ್ಲಿ ಬಿಜೆಪಿ ಕಳೆದ ಬಾರಿ ಗೆದ್ದ ಅಸೆಂಬ್ಲಿ ಸೀಟಿನಷ್ಟೇ ಅನ್ನು! ಅಷ್ಟೊಂದು ಇದ್ರೆ ಡೇಂಜರ್‍ರು ಕಣೋ, ಅಟ್ಲೀಷ್ಟು ಈ ಬಾರಿ ಯೋಗಿ ಗೆದ್ದ ಸಂಖ್ಯೆ 255ಕ್ಕಾದರೂ ಇಳಿಸು ಮಾರಾಯ…’ ಗೆಳೆಯ ತಿಂಗಳೇಶನಿಗೆ ಪ್ರಕಾಶನ ಮೊಬೈಲ್ ಸಲಹೆ.

‘ಆಯ್ತು, ನಿಂದು ಎಷ್ಟಿದೆ?’

‘ನಂದು ಕರೆಕ್ಟಾಗಿ ಬಿಜೆಪಿಯ ಮುಂದಿನ ಅಸೆಂಬ್ಲಿ ಎಲೆಕ್ಷನ್ ಟಾರ್ಗೆಟ್ ಸಂಖ್ಯೆ!’

ADVERTISEMENT

‘150 ಅಂದ್ರೆ ಚೊಲೋ ಕಂಟ್ರೋಲ್ ಮಾಡೀಬಿಡು. ಬೀಪಿ ಎಷ್ಟು ಐತೇ…?’ ಇದರಲ್ಲಾದರೂ ಹೆಚ್ಚಿನ ಸಂಖ್ಯೆ ಕೇಳಿ ಖುಷಿಪಡುವ ಉಪಾಯ ತಿಂಗಳೇಶನದು.

‘ನನ್ನ ಬೀಪಿ ನೋಡಪಾ ಸರಿಯಾಗಿ 124, ಅಖಿಲೇಶ್ ಗೆದ್ದ ಸೀಟುಗಳಿಗೆ ಸಮ’.

ಇದರಲ್ಲೂ ಸೋಲುಂಡ ತಿಂಗಳೇಶ ಪಂಜಾಬಿ
ನಲ್ಲಿ ಎಎಪಿ ಗೆದ್ದ ಸೀಟುಗಳಿಗೆ ಸಮವಾಗಿದ್ದ ತನ್ನ ಬೀಪಿಯನ್ನು ತಗ್ಗಿದ ದನಿಯಲ್ಲಿ ಪ್ರಕಟಿಸಿದ.

‘ಅಯ್ಯೋ… 92 ಲೋ ಬೀಪಿ! ಹಾಗೇ ಬಿಟ್ರೆ ಕಾಂಗ್ರೆಸ್ ಸಂಖ್ಯೆ ತಲುಪುತ್ತೀಯ. ಕೂಡಲೇ ಡಾಕ್ಟರಿಗೆ ತೋರಿಸು…’ ಪ್ರಕಾಶನ ಉಚಿತ ಸಲಹೆ ಮುಂದುವರಿಯಿತು.

ಪಕ್ಕದಲ್ಲಿ ಸಂಭಾಷಣೆ ಕೇಳುತ್ತಾ ಕುಳಿತಿದ್ದ ಪ್ರಕಾಶನ ಹೆಂಡತಿ ಲಲಿತಮ್ಮ ಮೌನ ಮುರಿದಳು:
‘ಅದೇನ್ರೀ ಆಗ್ಲಿಂದಾ ನೋಡ್ತಿದ್ದೇನೆ, ಆ ಪರಿ ರೈಲು ಬಿಡ್ತೀರಿ… ನಿಮಗಿರೋ ಶುಗರ್ ಲೆವೆಲ್ಲು ಬಿಜೆಪಿ- ಕಾಂಗ್ರೆಸ್- ಜೆಡಿಎಸ್ ಮೂರೂ ಪಕ್ಷಗಳ ಒಟ್ಟು ಟಾರ್ಗೆಟ್ ಮೀರುತ್ತದೆ. ಬೀಪಿ ನೋಡಿದ್ರೆ ಬಿಬಿಎಂಪಿ ಸೀಟುಗಳಷ್ಟಿದೆ…’

‘ಗೆಳೆಯನಿಗೆ ಮೊದಲೇ ಲೋ ಬೀಪಿ… ಅದನ್ನು ಒಂಚೂರು ಹೆಚ್ಚು ಮಾಡೋಣ ಅಂತ ಸುಳ್ಳು ಹೇಳಿದೆ. ಅದನ್ನೇ ನೀನು ಕುಮಾರಣ್ಣನ ಥರ ದೊಡ್ಡದು ಮಾಡಬೇಡ, ಬಸಣ್ಣನ ರೀತಿ ಸುಮ್ಮನಿರು…’

‘ಅದಿರ‍್ಲಿ, ದ್ವೇಷದ ವಿರುದ್ಧ ಪತ್ರ ಬರೆದ 61 ಪ್ರಗತಿಪರರ ಪಟ್ಟಿಯಲ್ಲಾದರೂ ನೀವು ಸೇರಬೇಕಿತ್ತಲ್ರೀ…’

‘ಅಂದ್ರೆ ನನ್ನನ್ನು ಹಿಟ್ ಲಿಸ್ಟ್‌ನಲ್ಲಿ ನೋಡ್ಬೇಕಂತೀ…?’

‘ಹೌದ್ರೀ… ಆ ಪಟ್ಟಿಯಲ್ಲಿದ್ರೆ ಸರ್ಕಾರದ ಗನ್‌ಮನ್‌ ಗ್ಯಾರಂಟಿ. ಹೋದಲ್ಲಿ ಬಂದಲ್ಲಿ ಗನ್‌ಮನ್‌ ಜೊತೆಗಿದ್ರೆ ಆ ಖದರೇ ಬೇರೆ… ನಿಮಗೆ ಅರ್ಥ ಆಗಲ್ಲ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.