ಡಿ.ಎಸ್. ಲಿಂಗರಾಜು
‘ಅಣ್ತಮ್ಮ, ನನ್ನ ಭಾವ ನೆಂಟನೊಬ್ಬ ಒಳ್ಳೆ ಇಲಾಖೇಲಿ ದೊಡ್ಡಾಫೀಸರಾಗಿದ್ದ. ಕಮಾಯಿ ಚೆನ್ನಾಗಿದ್ರೂ ಮನೇಲಿ ಹೆಂಡ್ರ ಸ್ಯಾಲೆ, ಮಕ್ಕಳ ಅಂಗಿ ಹರಿದು ಹಲ್ಲಂಡೆ ಆಗಿತ್ತು. ಆಫೀಸಿಗೆ ದೂರದಾಗೇ ಕಾರು ನಿಲ್ಲಿಸಿ, ಶೂ ಬಿಚ್ಚಿ ಕಾರಲ್ಲಿ ಮಡಗಿ, ಹಳೇ ಅಂಗಿ, ಹಳೆ ಚಪ್ಪಲಿ ಮೆಟ್ಕಂಡು ಆಫೀಸಿಗೆ ಹೋಗ್ತಿದ್ದ ಈ ಜಿಪುಣ. ಜನದ ಕಣ್ಣಿಗೆ ಕಾಣಿಸಿಗ್ಯಬಾರದು ಅಂತಿದ್ದ’ ತಿಪ್ಪಣ್ಣ ನೆನಪಿನ ಗಂಟು ಬಿಚ್ಚತೊಡಗಿದ್ದ.
‘ಈ ಥರಕೂ ಜನಿದ್ದಾರ್ಲಾ?’ ಅಂತಂದೆ.
‘ಕೇಳು. ರಿಟೈರಾಗ ಟೇಮಲ್ಲಿ ಲೋಕಾಯುಕ್ತರ ಆಫೀಸಿಗೋಗಿ, ಸಾ ಮೂವತ್ತು ವರ್ಸದಿಂದಾ ಅಕ್ರಮ ಸಂಪಾದ್ನೆ ಮಾಡಿ ಮನಸ್ಸಿಗೆ ಸ್ಯಾನೆ ಕಸಿವಿಸಿಯಾಗ್ಯದೆ. ಯಾರ್ನೂ ನಂಬಂಗಿಲ್ಲ ಸಾ. ಅದುಕ್ಕೇ ದುಡ್ಡು ಹೂತಾಕಿವ್ನಿ. ತೋರುಸ್ತೀನಿ ಬರ‍್ರಿ ಅಂತ ಕರಕೋದನಂತೆ’ ತಿಪ್ಪಣ್ಣನ ಕತೆಗೆ ಬೆರಗಾದೆ.
‘ಹೈಕೋರ್ಟು ಮುಂದ್ಕೆ ಕರಕೋಗಿ, ಈ ಗಿಡದ ಬಡ್ಡೇಲಿ ಒಂದು ಕೇಜಿ ಚಿನ್ನ ಅದೆ ಅಂದ್ನಂತೆ. ಆಮೇಲೆ, ಎರಡನೇ ಸ್ಲಾಟು ತುರಹಳ್ಳಿ ಕಾಡಲ್ಲಿ, ಮೂರನೇದು ಕೊಮ್ಮಘಟ್ಟದೇಲಿ, ನಾಲ್ಕನೇದು ಬೆಂಗಳೂರು ಯೂನಿವರ್ಸಿಟೀಲಿ, ಐದನೇದು ದೊಡ್ಡಾಲದ ಮರದ ತಾವದೆ.
ಹಿಂಗೇ ಹದಿನೈದು ಸ್ಲಾಟು ತೋರಿಸಿ, ಅಲ್ಲೆಲ್ಲಾ ದುಡ್ಡು–ಕಾಸು ಹೂತಾಕಿವ್ನಿ ಅಂದ್ನಂತೆ.’
‘ಅಲ್ಲೆಲ್ಲಾ ಮನೆ, ಕಟ್ಟಡ ಎದ್ದಿರತವಲ್ಲಾ ಅಣ್ತಮ್ಮಾ? ಯಾರಾದ್ರು ಎಪ್ಪೆಸ್ ಮಾಡಿದ್ರೆ?’ ನನ್ನ ಅನುಮಾನ ಹೇಳಿದೆ.
‘ಪೊಲೀಸು, ರೆವಿನ್ಯೂ, ಲೋಕಾಯುಕ್ತರು, ನ್ಯಾಯಾಧೀಸರು, ಟೀವಿಯೋರ ಮುಂದೆ ಈಯಪ್ಪನು ತೋರಿಸಿದ ಜಾಗದಲ್ಲೆಲ್ಲಾ ಸೋಸಿದರೂ ಹಳೇ ಮೆಟ್ಟು, ಹಳೇ ಕರ್ಚೀಫು, ಹರಿದೋಗಿರ ಚಡ್ಡಿಗಳು ಮಾತ್ರ ಈಚೆಗೆ ಬಂದವಂತೆ’ ತಿಪ್ಪಣ್ಣ ಹೇಳಿದ.
‘ಲೋಕಾಯುಕ್ತರು ಸಿಟ್ಟುಗಂದು, ಥೋ, ಇಲಿ ಬ್ಯಾಟೆಗೆ ಬಂದು ತಮಟೆ ಬಡಿದಂಗಾತು ಅಂತ ಮಕ್ಕುಗಿದು ಹೋದ್ರು’ ತಿಪ್ಪಣ್ಣ ಕಾಸು ಅದೃಶ್ಯವಾದ ಕತೆ ಮುಗಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.