ADVERTISEMENT

ಚುರುಮುರಿ: ಮಹಿಳಾ ದಿನಾಚರಣೆ

ಸುಮಂಗಲಾ
Published 7 ಮಾರ್ಚ್ 2021, 19:31 IST
Last Updated 7 ಮಾರ್ಚ್ 2021, 19:31 IST
   

ಬೆಳಗ್ಗೆ ಎದ್ದು ಬರುತ್ತಿದ್ದಂತೆ ಕೈಗೊಂದು ಗುಲಾಬಿ ತುರುಕಿದ ಬೆಕ್ಕಣ್ಣ ‘ಹ್ಯಾಪಿ ವುಮನ್ಸ್ ಡೇ’ ಎಂದು ಕಕ್ಕುಲಾತಿಯಿಂದ ವಿಶ್ ಮಾಡಿತು.

‘ವರ್ಷಕ್ಕೊಮ್ಮೆ ವುಮನ್ಸ್ ಡೇ ಮಾಡಿ ಕೈತೊಳ್ಕೊಂಡ್ರಾತೇನು... ಇಡೀ ವರ್ಷ ನಿಮ್ಮದೇ ಇರ್ತದ’ ನಾನು ಕುಟುಕಿದೆ.

‘ಎಲ್ಲಿ ನಮ್ಮದಿರ್ತದ... ಮಕ್ಕಳ ದಿನಾಚರಣೆಯಿಂದ ಹಿಡಿದು ಮದರ್ಸ್ ಡೇ, ಫಾದರ್ಸ್ ಡೇವರೆಗೆ ಎಲ್ಲಾರಿಗೂ ಒಂದೊಂದು ದಿನ ಸೆಲೆಬ್ರೇಟ್ ಮಾಡತೀರಿ. ಪಾಪ... ಗಂಡಸರಿಗಿ ಮೆನ್ಸ್ ಡೇ ಅಂತ ಎಲ್ಲೈತಿ? ಒಮ್ಮೆಯಾದ್ರೂ ನೀವು ಹೆಣಮಕ್ಕಳು ಮೆನ್ಸ್ ಡೇ ಆಚರಣೆ ಮಾಡಿ, ಗುಲಾಬಿ ಕೊಟ್ಟೀರೇನ್... ವರ್ಷಿಡೀ ಅವರಿಗಿ ಬ್ಯಾರೆಯವ್ರ ದಿನಾಚರಣೆ ಆಚರಿಸೂದೆ ಆಗತದ’ ಬೆಕ್ಕಣ್ಣ ಸಮಸ್ತ ಪುರುಷಮಣಿಗಳ ಪರವಾಗಿ ವಾದ ಶುರು ಮಾಡಿತು.

ADVERTISEMENT

‘ಆಚರಿಸೂದೇನ್ ಮಣ್ಣಾಂಗಟ್ಟಿ. ನ್ಯಾಷನಲ್ ಕ್ರೈಮ್ ದಾಖಲೆ ನೋಡೀಯಿಲ್ಲೋ... ದಿನದಿಂದ ದಿನಕ್ಕ ಹೆಣಮಕ್ಕಳ ಮ್ಯಾಗೆ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗ್ತಲೇ ಹೋಗೈತಿ, ಎಲ್ಲಾ ದಿನಗೋಳು ಮೆನ್ಸ್ ಡೇ ಅಂತ ಅವರು ಅಟ್ಟಹಾಸ ಮಾಡಿದಂಗೆ ಆತಿಲ್ಲೋ’.

‘ನೀ ಹಂಗ ಸಾರಾಸಗಟಾಗಿ ಎಲ್ಲಾ ಗುಡಿಸಿ ಹಾಕಬ್ಯಾಡ ನೋಡು’.

‘ಇನ್ನೇನ್‌ ಮತ್ತ, ಪ್ರಗತಿ ಚಕ್ರ ಮುಂದ್ ಅಲ್ಲ, ಭಾಳ ಹಿಂದ ಹೋಗಾಕೆಹತ್ತೈತಿ ಅಂತರ್ಥ...’

‘ಎಲ್ಲಾ ವಿಚಾರದಾಗೆ ಚಕ್ರ ಹಿಂದ್ ಹೋಗಾಕೆ ಹತ್ತಿಲ್ಲ. ದೆಹಲಿವಳಗ ರೈತ ಚಳವಳಿಯಿಂದ ಹಿಡಿದು ಮಂಗಳನ ಮ್ಯಾಗೆ ಇಳಿಸಿದ ಪರ್ಸಿವಿಯರೆನ್ಸ್ ನೌಕೆಯ ಪಥ ನಿಯಂತ್ರಣದವರೆಗೆ ಎಲ್ಲದರಾಗೆ ಮಹಿಳೆಯರೇ ಮುಖ್ಯ ಪಾತ್ರ ವಹಿಸ್ಯಾರೆ. ಈಗ ಜಗಳಾ ಎದಕ್ಕ... ಇವತ್ ನಾನೇ ಚಾ ಮಾಡಿಕೊಡ್ತೀನಿ’ ಜಾಣ ಬೆಕ್ಕಣ್ಣ ಮಾತು ಬದಲಿಸಿ ಅಡುಗೆ ಮನೆಗೆ ಓಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.