
‘ಅಬ್ಬಬ್ಬಾ... ಈ ಎಪ್‌ಸ್ಟೈನನ ಅಪರಾಧದ ದಾಖಲೆಗಳೇ 30 ಲಕ್ಷ ಪುಟ ಅದಾವಂತೆ! ಅಂದರೆ ಎಷ್ಟ್ ವರ್ಷ ಇಂವಾ ಲೈಂಗಿಕ ಅಪರಾಧದ ಹೊಲಸು ಕೆಲಸ ಮಾಡ್ತಾ, ಕಾನೂನಿನ ಕೈಯಿಂದಲೂ ತಪ್ಪಿಸಿಕೊಂಡಿದ್ದ’ ಎಂದು ಬೆಕ್ಕಣ್ಣ ಹಿಗ್ಗಾಮುಗ್ಗಾ ಬೈಯುತ್ತಿತ್ತು.
‘ಅವನ ಜೊತಿಗಿದ್ದ ಎಷ್ಟ್ ಮಂದಿ ಖ್ಯಾತನಾಮರ ಹೆಸರು ಈಗ ಹೊರಗೆ ಬರಾಕೆ ಹತೈತಿ. ಹೆಣ್ಣುಮಕ್ಕಳು ಅಂದ್ರೆ ಬರೇ ಭೋಗದ ವಸ್ತುಗಳು ಇವ್ರಿಗೆ’ ಎಂದೆ ನಾನು ಸಿಟ್ಟಿನಿಂದ.
‘ಅಂವಾ ಅದ್ದೂರಿ ಪಾರ್ಟಿ ಕೊಡತಿದ್ದನಂತೆ... ಹಣ, ಹೆಂಡ ಬಿಟ್ಟಿ ಸಿಗ್ತದ ಅಂತ ಖ್ಯಾತನಾಮರು ಎದ್ದುಬಿದ್ದು ಹೋಗ್ಯಾರೆ’ ಬೆಕ್ಕಣ್ಣ ಗುರುಗುಟ್ಟಿತು.
‘ಬ್ಯಾರೆ ದೇಶದಾಗೆ ಸಚಿವರು, ಸಂಸತ್ ಸದಸ್ಯರು ಅವನ ಜೊತೆಗಿನ ಸಂಪರ್ಕ ಹೊರಗ ಬಂದ ಮೇಲೆ ರಾಜೀನಾಮೆ ಕೊಟ್ಟಾರೆ. ಅದೇ ನಮ್ ದೇಶದಾಗೆ ರಾಜೀನಾಮೆ ಪ್ರಶ್ನೆನೇ ಇಲ್ಲ...’ ಎಂದೆ.
ಬೆಕ್ಕಣ್ಣ ತಟ್ಟನೆ ನಾಜೂಕಾಗಿ ವಾದ ಮಂಡಿಸಲು
ಶುರು ಮಾಡಿತು. ‘ಕಮಲಕ್ಕನ ಮನಿಯ ಪುರಿ ಅಂಕಲ್ಲು ಅಂವನ ಜೊತಿಗಿ ಮಾತುಕತಿ ನಡೆಸಿದ್ದು ಖರೇ. ಆದರೆ ಎಲ್ಲವೂ ದೇಶದ ವಿಕಾಸ, ವ್ಯವಹಾರಕ್ಕೆ ಸಂಬಂಧಿಸಿದ್ದು ಅಂತ ಹೇಳ್ಯಾರೆ’.
‘ಅಂವನ ಹೊಲಸು ಕೆಲಸಕ್ಕೆ 2006ರಲ್ಲಿ ಕೇಸಾದ ಮ್ಯಾಲೂ ಅಂಬಾನಿ ಅಂಕಲ್ಲು, ಪುರಿ ಅಂಕಲ್ಲು ಎಲ್ಲ ಅಂವನ ಜೊತಿ ವ್ಯವಹಾರ ನಡೆಸ್ಯಾರೆ. ಅಂವಾ ತಲೆಹಿಡುಕ ಕೆಲಸ ಮಾಡ್ಯಾನೆ ಅಂತ ಗೊತ್ತಾದ
ಮ್ಯಾಗೂ ಅಂವನ ಜೊತಿಗಿ ಇವ್ರು ಹೆಂಗೆ ವ್ಯವಹಾರ ಮಾಡ್ತಾರಲೇ? ಎಷ್ಟರೆ ಪೈಶಾಚಿಕ ಕೃತ್ಯ ಎಸಗ್ಯಾನೆ ಅಂವಾ!’ ಎಂದೆ.
‘ಇಂಥ ನೀಚ ಕೆಲಸ ಮಾಡಿದವರಿಗೆ ಪ್ರಾಣಿಯ ಹಂಗೆ, ಪೈಶಾಚಿಕ ಕೃತ್ಯ ಅಂತೆಲ್ಲ ಬಿರುದಾವಳಿ ಕೊಡೂದನ್ನು ನೀವು ಮನುಷ್ಯಾರು ಮೊದ್ಲು ನಿಲ್ಲಿಸ್ರಿ! ನಾವು ಪ್ರಾಣಿಗಳು ಎಲ್ಲ ವಿಚಾರದಾಗೂ ನಿಯತ್ತಿನಿಂದ ಇರತೀವಿ, ತಿಳಕೋ’ ಎಂದು ಬೆಕ್ಕಣ್ಣ ಗುರ‍್ರೆಂದಾಗ ನಾನು ನಾಚಿಕೆಯಿಂದ ತಲೆ ತಗ್ಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.