
‘ಏನೋ ತೆಪರ, ನಮ್ ಬಿಜಾಪುರದ ಹುಲಿ ಹೊಸ ಪಕ್ಷ ಕಟ್ಟುತ್ತಂತೆ?’ ದುಬ್ಬೀರ ಕೇಳಿದ.
‘ಕಟ್ಲಿ ಬಿಡು, ಹುಲಿ ಕಟ್ಟುತ್ತೆ ಅಂದ್ರೆ ಭರ್ಜರಿಯಾಗೇ ಇರುತ್ತೆ. ಆದ್ರೆ ಅಂತಿಂಥೋರು ಬರದಂಗೆ ನೋಡ್ಕಂಡ್ರೆ ಒಳ್ಳೇದು’ ತೆಪರೇಸಿ ನಕ್ಕ.
‘ಹುಲೀದಿರ್‍ಲಿ, ಕನ್ನಡ, ಕರ್ನಾಟಕದ ಹೆಸರಲ್ಲೂ ಕೆಲವರು ಪ್ರಾದೇಶಿಕ ಪಕ್ಷ ಕಟ್ತಾರಂತೆ, ಪೇಪರ್ ನೋಡ್ಲಿಲ್ವಾ?’ ಗುಡ್ಡೆ ಕೇಳಿದ.
‘ಹೌದಾ? ಕಟ್ಲಿ ಬಿಡು, ಆಕಾಶ ನೋಡಾಕೆ ನೂಕುನುಗ್ಲಾ? ಹಿಂದೆ ಬಾಳ ಜನ ಹೊಸ ಪಕ್ಷ ಕಟ್ಟಿದ್ರು, ಎಲ್ಲ ಚಪಾಟೆದ್ದು ಹೋದ್ವು. ಇವರದೂ ಒಂದು ಕೈ ನೋಡಿದ್ರಾತು’.
‘ಹೊಸ ಪಕ್ಷ ಅಂದ್ರೆ ಹೊಸ ಬಾಟ್ಲಿ ಇದ್ದಂಗೆ ಕಣ್ರಲೆ. ಒಳಗಿರೋದೆಲ್ಲ ಹಳೇ ಮದ್ಯನೇ, ಅವ್ರೇ ಹಳೇ ರಾಜಕಾರಣಿಗಳೇ. ಜನ ಬದ್ಲಾಗದೆ ಎಷ್ಟು ಪಕ್ಷ ಕಟ್ಟಿದ್ರೂ ಅಷ್ಟೇಯ’ ಮಂಜಮ್ಮ ಹೋಲ್‌ಸೇಲ್ ಮಾತಾಡಿದಳು.
‘ಜನಾನೆಂಗೆ ಬದ್ಲು ಮಾಡೋದು? ಹೊಸ ದೇಶ ಕಟ್ಟಬೇಕು ಅಷ್ಟೆ’.
‘ಹೊಸ ದೇಶನಾ? ನಮ್ ನಿತ್ಯಾನಂದನ ಕೈಲಾಸದ ತರನಾ? ನಿನ್ತೆಲಿ, ನಾವು ನೆಟ್ಟಗಿಲ್ಲದ್ದಕ್ಕೆ ದೇಶ ಏನ್ ಮಾಡ್ತದಲೆ?’ ದುಬ್ಬೀರ ಗರಂ ಆದ.
‘ಅದಿರ್‍ಲಿ, ನಮ್ ತೆಪರೇಸಿ ಅವನ ಮನೇಲಿದ್ದ ಚಾಕು, ಚೂರಿ, ಮಚ್ಚು ಎಲ್ಲ ಮಾಯ ಮಾಡಿದಾನಂತೆ, ಅದು ಗೊತ್ತಾ?’ ಗುಡ್ಡೆ ಕೇಳಿದ.
‘ಹೌದಾ? ಯಾಕಂತೆ?’
‘ಭಯ! ಮೊನ್ನೆ ಅದ್ಯಾರೋ ಪೊಲೀಸಪ್ಪನ್ನ ಅವನೆಂಡ್ತಿ ಚಾಕುನಿಂದ ಚುಚ್ಚಿ ಚುಚ್ಚಿ ಕೊಂದ್ಲು ಅಂತ ಸುದ್ದಿ ಬಂದಿತ್ತಲ್ಲ, ಅವತ್ತಿಂದ ತೆಪರ ಹುಷಾರಾಗಿಬಿಟ್ನಂತೆ. ಇವ್ನು ಗುಂಡು ಹಾಕಿ ಮನಿಗೋಗೋದು, ಗ್ರಾಚಾರ ಕೆಟ್ಟು, ಊಟಕ್ಕೆ ಕುಂತಾಗ್ಲೇ ಅವನೆಂಡ್ತಿ ಕೈಗೆ ಚಾಕು ಸಿಗೋದು. ಯಾಕೆ ಬೇಕು ಅಲ್ವಾ?’ ಗುಡ್ಡೆ ಕೀಟಲೆಗೆ
ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.