ADVERTISEMENT

ಚುರುಮುರಿ: ಬೆಲೆ ಬಾಧೆ

ಮಣ್ಣೆ ರಾಜು
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
   

‘ನಾಳೆ ಮಗಳ ಬರ್ತ್‌ಡೇ, ಕೇಕ್ ಆರ್ಡರ್ ಮಾಡಿದ್ದೇನೆ, ಹೊಸ ಡ್ರೆಸ್ ತಂದಿದ್ದೇನೆ’ ಕಾಫಿ ತಂದುಕೊಟ್ಟ ಸುಮಿ, ‘ಹಾಲು, ಕಾಫಿಪುಡಿ ರೇಟೂ ಜಾಸ್ತಿಯಾಗಿದೆ’ ಎಂದು ಎಚ್ಚರಿಸಿದಳು.

‘ಹಬ್ಬಹರಿದಿನಗಳ ಜೊತೆಗೆ ಮನೆಮಂದಿಯ ಬರ್ತ್‌ಡೇ, ವೆಡ್ಡಿಂಗ್ ಆ್ಯನಿವರ್ಸರಿಯಂತಹ ಕ್ಯಾಲೆಂಡರ್‌ನಲ್ಲಿ ಇಲ್ಲದ ಖರ್ಚಿನ ಆಚರಣೆಗಳನ್ನು ತಪ್ಪಿಸಲಾಗಲ್ಲ’ ಕಾಫಿ ಹೀರಿದ ಶಂಕ್ರಿ.

‘ಹೋದ ವರ್ಷಕ್ಕೆ ಹೋಲಿಸಿದರೆ ಕೇಕ್ ರೇಟ್ ಡಬಲ್ ಆಗಿದೆ, ಮಗಳ ಡ್ರೆಸ್ ಬೆಲೆಯೂ ದುಬಾರಿಯಾಗಿದೆ’.

ADVERTISEMENT

‘ಮಗಳು ಬೆಳೆಯುತ್ತಿದ್ದಾಳೆ, ಪದಾರ್ಥಗಳ ಬೆಲೆಯೂ ಮಕ್ಕಳು ಬೆಳೆಯುವಂತೆ ಬೆಳೆಯುವುದು ಕಾಲಧರ್ಮ’.

‘ಇಲ್ನೋಡಿ, ಆರು ತಿಂಗಳ ಹಿಂದಿನ ಮನೆಯ ತಿಂಗಳ ಸಾಮಾನಿನ ಬೆಲೆ ಈಗ 30-40 ಪರ್ಸೆಂಟ್ ಏರಿಕೆಯಾಗಿದೆ’ ಹಳೆ, ಹೊಸ ಬಿಲ್ ಹೋಲಿಕೆ ಮಾಡಿ ಹೇಳಿದಳು ಸುಮಿ.

‘ಒಂದರ ಬೆಲೆ ಹೆಚ್ಚಾದರೆ ಇತರ ಪದಾರ್ಥಗಳ ಬೆಲೆಯೂ ಹೆಚ್ಚಾಗಿಬಿಡುತ್ತದೆ. ಬೆಲೆ ಏರಿಕೆ ಎಂಬುದು ಸಾಂಕ್ರಾಮಿಕ ರೋಗದಂತೆ’.

‘ಬೆಲೆ ಏರಿಕೆ ವಿರುದ್ಧ ರಾಜಕಾರಣಿಗಳ ಹೋರಾಟ ಶುರುವಾಗಿದೆ. ಹಾಲು, ಕರೆಂಟು, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಈ ಪಕ್ಷದವರ ಹೋರಾಟ, ಅಡುಗೆ ಅನಿಲ್ ದರ ಏರಿಕೆ ವಿರುದ್ಧ ಆ ಪಕ್ಷದವರ ರೇಗಾಟ. ಈ ಆಟಗಳ ನಡುವೆ ನಮ್ಮ ಗೃಹಲಕ್ಷ್ಮಿ ಮೊತ್ತ ಏರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿ ನಾವೂ ಕೂಗಾಟ ಮಾಡ್ತೀವಿ’.

‘ಸರ್ಕಾರವನ್ನು ನಂಬಿಕೊಂಡು ಸಂಸಾರ ಮಾಡಲಾಗದು. ಬೆಲೆ ಏರಿಕೆಗೆ ತಕ್ಕಂತೆ ನಮ್ಮ ಆದಾಯವನ್ನೂ ಹೆಚ್ಚಿಸಿಕೊಳ್ಳಬೇಕು’.

‘ಹೌದು, ಸಂಬಳ ಜಾಸ್ತಿ ಮಾಡಿ ಅಂತ ನಿಮ್ಮ ಆಫೀಸ್ ಬಾಸ್‍ಗೆ ಒತ್ತಾಯ ಮಾಡ್ರೀ’.

‘ಮಾಡಿದ್ವಿ, ಬೇಕೆನಿಸಿದಾಗಲೆಲ್ಲಾ ವೇತನ ಜಾಸ್ತಿ ಮಾಡಲು ನಾನು ಸರ್ಕಾರವೂ ಅಲ್ಲ, ನೀವು ಶಾಸಕರೂ ಅಲ್ಲ ಅಂತ ಗದರಿ ಕಳಿಸಿದರು’ ಶಂಕ್ರಿ ನಿಟ್ಟುಸಿರುಬಿಟ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.