ADVERTISEMENT

ಚುರುಮುರಿ: ಕೆಂಪೇಗೌಡರು ಬಂದರು!

ಗುರು ಪಿ.ಎಸ್‌
Published 3 ಸೆಪ್ಟೆಂಬರ್ 2025, 23:30 IST
Last Updated 3 ಸೆಪ್ಟೆಂಬರ್ 2025, 23:30 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ನಾಡಪ್ರಭುಗಳೇ ತಾವು!?’ ಅಚ್ಚರಿಯಿಂದ ಎದ್ದು ಕುಳಿತರು ಬಿಬಿಎಂಪಿ ಡೆಪ್ಯುಟಿ ಕಮಿಷನರ್. 

‘ಹೌದು ನಾನೇ, ಈ ಬೆಂಗಳೂರು ನಗರ ನಿರ್ಮಾಣವಾಗಿದ್ದು ನನ್ನ ಅವಧಿಯಲ್ಲೇ’ ಕೆಂಪೇಗೌಡರು ಹೇಳಿದರು. 

ADVERTISEMENT

‘ಗೊತ್ತು ಸ್ವಾಮಿ, ನನ್ನ ಕನಸಿನಲ್ಲಿ ಬರಲು ಕಾರಣ?’ 

‘ಏನಿಲ್ಲ, ನೀನು ಸೂಟ್‌ ಮೇಲೆ ಸೂಟ್‌ ಖರೀದಿಸು ತ್ತಿದ್ದುದನ್ನ ಗಮನಿಸ್ತಿದ್ದೆ. ಕುತೂಹಲವೆನಿಸಿತು. ನೇರವಾಗಿ ಮಾತನಾಡಿಕೊಂಡು ಹೋಗೋಣ ಎಂದು ಬಂದೆ’.

‘ನೀವು ಕಟ್ಟಿದ ಬೆಂಗಳೂರನ್ನ ಈಗ ಐದು ಭಾಗ ಮಾಡಿದ್ದಾರೆ. ಅಂದ್ರೆ ಐದು ಕಾರ್ಪೊರೇಷನ್‌ಗಳು ತಲೆ ಎತ್ತಲಿವೆ. ಈಗ ಇದು ಗ್ರೇಟರ್ ಬೆಂಗಳೂರು!’ 

‘ಅದಕ್ಕೆ, ನಿನಗೇಕೆ ಖುಷಿ?’ 

‘ನಾನು ಉಪ ಆಯುಕ್ತ ಬದಲು, ಆಯುಕ್ತ ಆಗ್ತೀನಿ. ಅದೇ ಖುಷಿ’.

‘ಅದು ಸರಿ, ಎಷ್ಟೋ ಜನ ತಮ್ಮ ಹೆಸರ ಮುಂದಿನ ‘ಉಪ’ ನಾಮ ತೆಗೆಸಿಕೊಳ್ಳಲು ಕಸರತ್ತನ್ನೇ ಮಾಡುತ್ತಿದ್ದಾರೆ, ನಿನಗೆ ಕುಳಿತಲ್ಲೇ ಆ ಅದೃಷ್ಟ ಒಲಿದಿದೆ’ ನಕ್ಕರು ಗೌಡರು. 

‘ನಾಡಪ್ರಭುಗಳು ಬಳಲಿದಂತೆ ಕಾಣುತ್ತಿದ್ದೀರಲ್ಲ, ನಿಮ್ಮ ಕುದುರೆಗಳೆಲ್ಲಿ?’ 

‘ಮೂರ್ಖ, ಈಗಲೂ ಕುದುರೆ ಮೇಲೆ ಬರಲಾಗುತ್ತದೆಯೇ? ನಾನು ಬೈಕ್‌ನಲ್ಲಿ ಬಂದೆ’.

‘ಸ್ವರ್ಗದಿಂದ ಬರುವುದು ಕಷ್ಟವಾಯಿತೇನೋ?’

‘ಸ್ವರ್ಗದಿಂದ ಬರುವುದು ಕಷ್ಟವಾಗಲಿಲ್ಲ, ಆದರೆ, ನಿಮ್ಮ ಗ್ರೇಟರ್‌ ಬೆಂಗಳೂರು ಪ್ರವೇಶಿಸಿದ ತಕ್ಷಣ, ಆಳೆತ್ತರದ ಗುಂಡಿಯಲ್ಲಿ ನನ್ನ ಬೈಕ್‌ ಎದ್ದು, ಬಿದ್ದು ಬರುವುದರಲ್ಲೇ ಸುಸ್ತಾಗಿ ಹೋಯಿತು’.

‘ಪ್ರಭುಗಳೇ, ನೀವು ಬರುವುದು ಗೊತ್ತಿದ್ದರೆ ಅಲ್ಲಲ್ಲಿ ಪ್ಯಾಚ್‌ ಹಾಕಿಸಿ, ಜೀರೊ ಟ್ರಾಫಿಕ್‌ ಮಾಡಿಸುತ್ತಿದ್ದೆ’.

‘ನಿಮ್ಮ ಬೆಂಗಳೂರು ಟ್ರಾಫಿಕ್‌ಗೆ ಎಂಥ ಹೀರೊಗಳೂ ಜೀರೊಗಳಾಗುತ್ತಾರೆ ಬಿಡು’ ಎಂದ ಕೆಂಪೇಗೌಡರು, ‘ಐದು ಕಾರ್ಪೊರೇಷನ್‌ ಮಾಡೋದರಿಂದ ತಕ್ಷಣದ ಒಂದು ಅನುಕೂಲ ಹೇಳು ನೋಡೋಣ’ ಎಂದರು.

‘ಟೇಬಲ್‌ಗಳ ಸಂಖ್ಯೆ ಜಾಸ್ತಿ ಆಗುತ್ತೆ ಸಾರ್‌’ ಎಂದು ಅಧಿಕಾರಿ ಹೇಳುತ್ತಿದ್ದಂತೆ, ಮಾಯವಾದರು ನಾಡಪ್ರಭುಗಳು! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.