ADVERTISEMENT

ಚುರುಮುರಿ: ಚಿನ್ನದ ನಿಧಿಯೇ ಅನುದಾನ!

ಗುರು ಪಿ.ಎಸ್‌
Published 15 ಜನವರಿ 2026, 0:42 IST
Last Updated 15 ಜನವರಿ 2026, 0:42 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

ಚ‘ಗದುಗಿನ ಲಕ್ಕುಂಡಿಯಲ್ಲಿ ಒಬ್ಬರಿಗೆ ಸುಮಾರು ಅರ್ಧ ಕೆಜಿಯಷ್ಟು ಬಂಗಾರ ಸಿಕ್ಕಿದೆಯಂತೆ ನೋಡ್ರೀ...’ ಪೇಪರ್ ಓದುತ್ತಾ ಖುಷಿಯಿಂದ ಹೇಳಿದಳು ಹೆಂಡತಿ. 

‘ನಿನಗೇ ಚಿನ್ನ ಸಿಕ್ಕಷ್ಟು ಖುಷಿಪಡ್ತಿದ್ದೀಯಲ್ಲಮ್ಮ’ ಉತ್ಸಾಹ ಕಡಿಮೆ ಮಾಡುವಂತೆ ಹೇಳಿದೆ. 

ADVERTISEMENT

‘ಆ ಚಿನ್ನದ ಸರಗಳ ಡಿಸೈನ್ ನೋಡ್ರಿ, ಎಷ್ಟು ಚೆನ್ನಾಗಿದೆ. ನನಗೇನಾದರೂ ಸಿಕ್ಕಿದ್ರೆ, ರೇಷ್ಮೆ ಸೀರೆ ಉಟ್ಕೊಂಡು, ಆ ಜ್ಯುವೆಲ್ಸ್ ಎಲ್ಲ ಹಾಕ್ಕೊಂಡು ಫೋಟೊಶೂಟ್ ಮಾಡಿಸ್ತಿದ್ದೆ’.

‘ಓಯ್, ಅದು ನೆಲ ಅಗೆಯುವಾಗ ಸಿಕ್ಕಿರೋದು. ಭೂಮಿ ಅಡಿ ಸಿಗೋದೆಲ್ಲ ಸರ್ಕಾರದ ಸ್ವತ್ತು. ಅದನ್ನೆಲ್ಲ ಸರ್ಕಾರದ ವಶಕ್ಕೆ ತಗೊಂಡಾಯ್ತು ಆಗಲೇ...’

‘ಅದೆಂಥ ರೂಲ್ಸ್ ರೀ... ನಮ್ ಸೈಟ್‌ನಲ್ಲಿ ಸಿಕ್ಕರೆ ಅದು ನಮ್ಮದಲ್ವ’ ಎಂದ ಹೆಂಡತಿ, ‘ನನಗನಿಸುತ್ತೆ, ನಮ್ಮ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜರ ಆಡಳಿತವೇ ಹೆಚ್ಚಾಗಿತ್ತಲ್ವ, ಹಾಗಾಗಿ, ಅಲ್ಲಿ ಗೋಲ್ಡ್ ಜಾಸ್ತಿ ಇದೆ. ಅಲ್ಲಲ್ಲಿ ಅಗೆದರೆ ಇನ್ನೂ ನಿಧಿ ಸಿಗಬಹುದು’ ಸರ್ಕಾರಕ್ಕೇ ಐಡಿಯಾ ಕೊಡುವಂತೆ ಹೇಳಿದಳು. 

‘ಸುಮ್ನಿರಮ್ಮ ನೀನು, ನಮ್ಮ ಮಂತ್ರಿ ಮಹೋದಯರಿಗೆ ಮೊದಲೇ ಉತ್ತರ ಕರ್ನಾಟಕ ಅಂದ್ರೆ ನಿರ್ಲಕ್ಷ್ಯ. ಆಮೇಲೆ, ನಿಮ್ಮ ಬಳಿ ಇಷ್ಟೆಲ್ಲ ನಿಧಿ ಇದೆಯಲ್ಲ ಅಂತೇಳಿ ಅನುದಾನ ಕೊಡೋದನ್ನೇ ನಿಲ್ಲಿಸಿಬಿಟ್ಟಾರು’ ಎಂದೆ ಆತಂಕದಿಂದ. 

‘ಆದರೂ ರೀ, ಈ ರೂಲ್ಸ್ ಚೇಂಜ್ ಮಾಡಬೇಕು. ಭೂಮಿ ಅಡಿ ಏನು ಸಿಕ್ಕರೂ ಸರ್ಕಾರ ತಗೊಳ್ಳಲಿ. ಚಿನ್ನ ಇದ್ದರೆ ಮಾತ್ರ ಆ ಜಾಗದ ಮಾಲೀಕರಿಗೆ ಕೊಡಲಿ ಅಂತ ಮೊದಲಿಗೆ ನಾನೇ ಆನ್‌ಲೈನ್ ಕ್ಯಾಂಪೇನ್ ಸ್ಟಾರ್ಟ್ ಮಾಡ್ತೀನಿ’ ಅಂದಳು. 

‘ನೀನು ಏನೇ ಬರೆದರೂ ಕನ್ನಡದಲ್ಲಿ ಬರೆಯಮ್ಮ. ಇಂಗ್ಲಿಷ್‌ನಲ್ಲಿ ಬೇಡ’.

‘ಯಾಕ್ರೀ ಹೀಗಂತೀರಿ?’ 

‘ಇಂಗ್ಲಿಷ್‌ನಲ್ಲಿ ಬರೆದಿದ್ದನ್ನ ಅಮೆರಿಕ ಅಧ್ಯಕ್ಷ ಟ್ರಂಪ್ ಓದಿ, ತನ್ನ ‘ಟ್ರುಥ್’ನಲ್ಲಿ, ಐದು ತಲೆಮಾರುಗಳ ಹಿಂದೆ ನಾನೇ ಲಕ್ಕುಂಡಿ ರಾಜ ಆಗಿದ್ದೆ. ಅದು, ನನ್ನದೇ ಬಂಗಾರ ಅಂತ ಪೋಸ್ಟ್ ಹಾಕಿದರೆ ಏನ್ ಮಾಡೋಣ’ ಎಂದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.