ADVERTISEMENT

ಚುರುಮುರಿ: ಅಬಕಾರಿ ಹಬ್ಬ

ಮಣ್ಣೆ ರಾಜು
Published 31 ಡಿಸೆಂಬರ್ 2025, 0:25 IST
Last Updated 31 ಡಿಸೆಂಬರ್ 2025, 0:25 IST
.
.   

‘ಹೊಸ ವರ್ಷಾಚರಣೆ ಎಂಬುದು ‘ಅಬಕಾರಿ ಹಬ್ಬ’ದಂತಾಗಿಬಿಟ್ಟಿದೆ ಕಣ್ರೀ...’ ಅಂದಳು ಸುಮಿ.

‘ಎಣ್ಣೆಯಲ್ಲಿ ಬೋಂಡಾ ತೇಲಿಸೋದು ಮಾಮೂಲಿ ಹಬ್ಬ, ಎಣ್ಣೆ ಹಾಕ್ಕೊಂಡು ತೇಲಾಡೋದು ಅಬಕಾರಿ ಹಬ್ಬ!’ ಅಂದ ಶಂಕ್ರಿ.

‘ಹಬ್ಬದಂದು ಬೆಳಗಿನಿಂದಲೇ ಎಣ್ಣೆ ಮಾರಾಟಕ್ಕೆ, ಲೇಟ್‌ನೈಟ್ ಪಾರ್ಟಿಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಎಣ್ಣೆ ಮತ್ತಿನಲ್ಲಿ ವ್ಹೀಲಿಂಗ್, ಕೀಟಲೆ ಮಾಡೋರು, ರಸ್ತೆಯಲ್ಲಿ ಬಿದ್ದವರ ಬಗ್ಗೆ ಪೊಲೀಸರು ನಿಗಾ ವಹಿಸುತ್ತಾರಂತೆ’.

ADVERTISEMENT

‘ಗಂಧದನಾಡು ಗಾಂಜಾಬೀಡು ಆಗಿಬಿಟ್ಟಿದೆ ಎಂದು ವಿಪಕ್ಷದವರು ಆರೋಪ ಮಾಡ್ತಿದ್ದಾರಲ್ರೀ...’

ಅಷ್ಟರಲ್ಲಿ ಬಂದ ಗೋಪಾಲಿ, ವೈಶಾಲಿ, ‘ನ್ಯೂ ಇಯರ್ ಪಾರ್ಟಿಗೆ ನೀವೂ ಬರ್ತೀರೇನ್ರೀ?’ ಎಂದು ಕೇಳಿದರು.

‘ಕಿಕ್–ಔಟ್ ಇವೆಂಟ್‌ನವರು ಪಾರ್ಟಿ ಅರೇಂಜ್ ಮಾಡಿದ್ದಾರೆ, ನಾವು ಬುಕ್ ಮಾಡಿದ್ದೀವಿ, ಫ್ಯಾಮಿಲಿಗೆ ಸ್ಪೆಷಲ್ ಡಿಸ್ಕೌಂಟ್ ಇದೆ’ ಎಂದಳು ವೈಶಾಲಿ.

‘ಕಿಕ್–ಔಟ್ ಪಾರ್ಟಿಯಲ್ಲಿ ಏನೇನಿರುತ್ತೆ?’ ಶಂಕ್ರಿಗೆ ಕುತೂಹಲ.

‘ತಿನ್ನುವಷ್ಟು, ಕುಡಿಯುವಷ್ಟು, ಕುಣಿಯುವಷ್ಟು ಇರುತ್ತೆ’ ಗೋಪಾಲಿ ಸಂಭ್ರಮದಿಂದ ಹೇಳಿದ.

‘ವಯಸ್ಸಿಗೆ ಬಂದ ಮಕ್ಕಳಿದ್ದಾರೆ, ಅಂಥಾ ಪಾರ್ಟಿಗಳಿಗೆ ನಾವು ಬರೋದಿಲ್ಲ...’ ಸುಮಿ ಕಾಫಿ ತಂದುಕೊಟ್ಟಳು.

‘ಡ್ರಿಂಕ್ಸ್ ಮಾಡೋದು ಈಗೆಲ್ಲಾ ಕಾಮನ್. ನಮ್ಮ ಮಗ ಹೋದ ವರ್ಷದ ಪಾರ್ಟಿಯಲ್ಲಿ ಡ್ರಿಂಕ್ಸ್ ಕಲಿತ. ಬಹುತೇಕರು ನ್ಯೂ ಇಯರ್ ಪಾರ್ಟಿಯಿಂದಲೇ ಕುಡಿತ ಕಲಿಯುತ್ತಾರೆಂದು ಅಂಕಿಅಂಶ ಹೇಳುತ್ತೆ’.

‘ಮಕ್ಕಳನ್ನೂ ಪಾರ್ಟಿಗೆ ಕರೆತನ್ನಿ, ಡ್ರಿಂಕ್ಸ್ ಬೇಡಾಂದ್ರೆ ಊಟ ಮಾಡಿ ಐಸ್‌ಕ್ರೀಂ ತಿನ್ನಬಹುದು. ಐಸ್‌ಕ್ರೀಂಗೆ ಚಾರ್ಜ್ ಇಲ್ಲ’ ವೈಶಾಲಿ ಹೇಳಿದಳು.

‘ಕೊರೆಯೋ ಚಳಿಯಲ್ಲಿ ಐಸ್‌ಕ್ರೀಂ ಯಾರಿಗೆ ಬೇಕು... ನಾವು ಬರೋದಿಲ್ಲ, ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಬರ್ತೀವಿ’ ಸುಮಿ ನಿಷ್ಠುರವಾಗಿ ಹೇಳಿದಳು.

‘ನೀವಿನ್ನೂ ಯಾವ ಕಾಲದಲ್ಲಿದ್ದೀರಿ? ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು...’ ಎಂದು ಗೋಪಾಲಿ, ವೈಶಾಲಿ ಬೇಸರ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.