ADVERTISEMENT

ಚುರುಮುರಿ: ಇ-ಟೆಂಡರ್, ಅರ್ಹ ರೆಬೆಲ್ ರಾಜಕಾರಣಿಗಳಿಂದ ಅರ್ಜಿ ಆಹ್ವಾನ

ಲಿಂಗರಾಜು ಡಿ.ಎಸ್
Published 28 ಜೂನ್ 2022, 2:46 IST
Last Updated 28 ಜೂನ್ 2022, 2:46 IST
ಚುರುಮುರಿ
ಚುರುಮುರಿ   

ಹೊಸದಾಗಿ ಸೃಜಿಸಲಾದ ಅರಾಜಕೀಯತೆ, ಇಬ್ಬಂದಿ ಮತ್ತು ದುರಾಡಳಿತ ಇಲಾಖೆಯ ಕಾರ್ಯಭಾರ ಹೆಚ್ಚಿಸುವ ಉದ್ದೇಶದಿಂದ ಹಾಗೂ ದೇಶದ ಎಲ್ಲಾ ರಾಜ್ಯಗಳಲ್ಲಿ ಏಕ ಪಕ್ಷದ ಸರ್ಕಾರಗಳನ್ನು ಜಾರಿಗೆ ತರಲು ಅನ್ಯ ಸರ್ಕಾರಗಳನ್ನು ಬೀಳಿಸಿ ಬಂಡಾಯ ಆರಂಭಿಸಬಲ್ಲ ಅರ್ಹ ರೆಬೆಲ್ ರಾಜಕಾರಣಿಗಳಿಂದ ಐಟಂವಾರು ದರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸರ್ಕಾರ ರಚನೆ ಮತ್ತು ಮಂತ್ರಿ ಪದವಿ ಹಂಚಿಕೆಯಲ್ಲಿ ಬಂಡಾಯ, ಬೆದರಿಕೆ, ಕಚ್ಚಾಟ ಗಳಲ್ಲಿ ಸಮಯ ವ್ಯರ್ಥವಾಗುತ್ತಾ ಅಕ್ರಮ ಸಂಪಾದನೆಗೆ ಹೆಚ್ಚು ಸಮಯ ದೊರೆಯುತ್ತಿಲ್ಲ. ಈ ಕಾರಣದಿಂದ ಬಂಡಾಯ ರಾಜಕಾರಣಿಗಳಿಗೆ ಅನುಕೂಲವಾಗುವಂತೆ ಹೊಸದಾಗಿ ಇ-ಎಂಎಲ್‍ಎ ಪೋರ್ಟಲ್ ಆರಂಭಿಸಲಾಗಿದೆ. ಬಂಡಾಯಗಾರರು ತಮ್ಮ ವಶದಲ್ಲಿರುವ ಜನಪ್ರತಿನಿಧಿಗಳ ಸಂಖ್ಯೆ, ಹೆಸರುಗಳ ಪೂರ್ಣ ವಿವರಗಳನ್ನು ಇ-ಟೆಂಡರ್ ಮೂಲಕ ದ್ವಿ ಲಕೋಟೆಯಲ್ಲಿ ಸಲ್ಲಿಸುವುದು. ಇಲಾಖೆಯು ಟೆಂಡರನ್ನು ಪರಿಶೀಲಿಸಿದ ನಂತರ ಮುಂದಿನ ಸರ್ಕಾರದಲ್ಲಿ ಪಕ್ಷದ ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಿ ಇ-ರೆಬೆಲ್ ಶಾಸಕರಿಗೆ ಭಾರಿ ಖಾತೆಗಳನ್ನು ನೀಡಲಾಗುವುದು.

ರೆಬೆಲ್ ನಾಯಕರು ದೂರದ ರೆಸಾರ್ಟುಗಳಿಗೆ ಜನಪ್ರತಿನಿಧಿಗಳ ವಿಮಾನಯಾನದ ಖರ್ಚಿನ ಮಾಹಿತಿ, ಹೋಟೆಲ್ ವಾಸದಲ್ಲಿ ಊಟ–ಉಪಚಾರದ ವೆಚ್ಚ, ರೆಬೆಲ್ ಪ್ರತಿನಿಧಿ ನಿರೀಕ್ಷಿಸುವ ಈವಿಲ್ ಪರ್ಸೆಂಟೇಜ್, ಜನಪ್ರತಿನಿಧಿಗಳು ನಿರೀಕ್ಷಿಸುವ ತಲಾವಾರು ಮೊತ್ತ 100 ಕೋಟಿಯ ಒಳಗೆ ಇರುವಂತೆ ಸೂಚಿಸತಕ್ಕದ್ದು.

ADVERTISEMENT

ಜನಪ್ರತಿನಿಧಿಗಳು ಮುಂದಿನ ಚುನಾವಣೆಯಲ್ಲಿ ತಮ್ಮ ಕುಟುಂಬಕ್ಕೆ ನಿರೀಕ್ಷಿಸುವ ಟಿಕೆಟುಗಳ ಸಂಖ್ಯೆ, ಮಂತ್ರಿ ಖಾತೆಗಳ ಸಂಖ್ಯೆಯನ್ನು ಎಗ್ಗು ತಗ್ಗಿಲ್ಲದೆ ನಮೂದಿಸಬಹುದು.

ಟೆಂಡರ್ ನಮೂನೆಗಳನ್ನು ಇ-ಎಂಎಲ್‍ಎ ರಾಜಕೀಯ ಪೋರ್ಟಲ್ಲಿನಿಂದ ಡೌನ್‍ಲೋಡ್ ಮಾಡಿಕೊಳ್ಳುವುದು. ಹೆಚ್ಚಿನ ವಿವರಗಳನ್ನು ಇಲಾಖೆ ಅಥವಾ ಪಕ್ಷದ ಕಚೇರಿಯಿಂದ ರಹಸ್ಯವಾಗಿ ಪಡೆಯಬಹುದು. ಸೂಕ್ತ ಟೆಂಡರು ಬಾರದಿದ್ದಲ್ಲಿ ಸಿಎಂ, ಮಂತ್ರಿ ಪದವಿಗಳನ್ನು ಬಹಿರಂಗ ಹರಾಜಿಗೆ ಇಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.