ADVERTISEMENT

ಚುರುಮುರಿ: ಬಜೆಟ್ ಭಜನೆ

ಮಣ್ಣೆ ರಾಜು
Published 8 ಮಾರ್ಚ್ 2022, 19:15 IST
Last Updated 8 ಮಾರ್ಚ್ 2022, 19:15 IST
   

‘ಸರ್ಕಾರದ ಬಜೆಟ್ ಮಂಡನೆ ಮುಗಿದು ಇಷ್ಟು ದಿನಾದರೂ ನಾಯಕರು ಅದರ ಭಜನೆ ನಿಲ್ಲಿಸಿಲ್ಲ... ಬಜೆಟ್ ಬಗ್ಗೆ ಆಳುವ ಪಕ್ಷದ ಕೇಕೆ, ಕೇಳುವ ಪಕ್ಷಗಳ ಟೀಕೆ ಚುನಾವಣೆವರೆಗೂ ಮುಂದುವರಿಯಬಹುದಾ?’ ಸುಮಿ ಕೇಳಿದಳು.

‘ಇದು ಚುನಾವಣೆ ಬಜೆಟ್ ಅಂತ ನಾಯಕರೇ ನಾಮಕರಣ ಮಾಡಿರುವುದರಿಂದ ಈ ಬಜೆಟ್ ವೋಟ್ ಮ್ಯಾಟರ್ ಆಗಬಹುದು’ ಅಂದ ಶಂಕ್ರಿ.

‘ಈ ಬಜೆಟ್ ಯುಗಾದಿಯ ಒಬ್ಬಟ್ಟು ಅಂತ ಆಡಳಿತ ಪಕ್ಷದ ನಾಯಕರು ಚಪ್ಪರಿಸುತ್ತಿದ್ದಾರೆ.
ಹೂರಣ ಇಲ್ಲದ ಸಪ್ಪೆ ಹೋಳಿಗೆ ಅಂತ ಸಿದ್ದರಾಮಣ್ಣ ತೆಗಳಿದ್ದಾರೆ. ಉಪ್ಪು, ಹುಳಿ, ಖಾರ ಇಲ್ಲದ ಸತ್ವಹೀನ ಬಜೆಟ್ ಅಂತ ಕುಮಾರಣ್ಣ ಕೀಟಲೆ ಮಾಡಿದ್ದಾರೆ’.

ADVERTISEMENT

‘ಅವರವರ ಪಕ್ಷನಿಷ್ಠಾನುಸಾರ ಬಜೆಟ್ ವಿಶ್ಲೇಷಣೆ ಮಾಡ್ತಾರೆ. ಉದ್ಯೋಗ ಸೃಷ್ಟಿ, ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುವ ಕಾರ್ಯಕ್ರಮಗಳಿಲ್ಲ ಅಂತನೂ ಟೀಕಿಸಿದ್ದಾರೆ’.

‘ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಬದುಕು ದುಬಾರಿಯಾಗಿದೆ. ಈ ಬಜೆಟ್‍ನಿಂದ ನಮ್ಮಂಥವರಿಗೆ ಏನೇನು ಪ್ರಯೋಜನ ಆಗಬಹುದು?’

‘ಕಾಶಿ ಯಾತ್ರೆಗೆ ಹೋಗಲು ಧನಸಹಾಯ, ತೀರ್ಥಯಾತ್ರೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರೋದು ನಮ್ಮಂಥವರಿಗಾಗಿ, ಜೊತೆಗೆ ಜಾತಿಗೊಂದು ನಿಗಮ ಮಾಡಿ ಕೋಟ್ಯಂತರ ರೂಪಾಯಿ ಕೊಟ್ಟಿದೆ, ಅದರ ಸೌಲಭ್ಯ ಪಡೆದು ಸರ್ವಜನರೂ ಸುಖವಾಗಿರಬಹುದಂತೆ’.

ಹಾಗಲ್ಲಾರೀ, ನಾವೂ ತೆರಿಗೆ ಕಟ್ಟುತ್ತೇವೆ, ಸರ್ಕಾರ ನಮ್ಮಂಥವರಿಗೆ ಮನೆ ಸಾಲ, ಒಡವೆ ಸಾಲ, ವಾಹನ ಸಾಲ ಕೊಟ್ಟು ಆಮೇಲೆ ಮನ್ನಾ ಮಾಡಬೇಕು ಅಲ್ವಾ?’

‘ನಮ್ಮ ಜುಜುಬಿ ತೆರಿಗೆ ಹಣದಿಂದ ಇಷ್ಟು ದೊಡ್ಡ ಬಜೆಟ್ ರೂಪಿಸಲು ಸಾಧ್ಯವಿಲ್ಲ. ಎಲ್ಲಾ ಸರ್ಕಾರಗಳು ಸಾಲ ನಂಬಿಕೊಂಡೇ ಬಜೆಟ್ ಸಿದ್ಧ ಮಾಡುತ್ತವೆ. ಬಜೆಟ್ ಸೌಲಭ್ಯ ಸಿಗದಿದ್ದರೂ ಸಾಲದ ಪಾಲು ಮಾತ್ರ ನಮಗೆ ಸಿಗುತ್ತೆಬಿಡು...’ ಎಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.