ADVERTISEMENT

ಮಿಣಿ ಮಿಣಿ ಬೆವರು!

ಗುರು ಪಿ.ಎಸ್‌
Published 28 ಜನವರಿ 2020, 19:58 IST
Last Updated 28 ಜನವರಿ 2020, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ ಅದೆಂಥದೋ ಮಿಣಿ ಮಿಣಿ ಪೌಡ್ರು ಮಾರ್ಕೆಟ್‌ಗೆ ಬಂದೈತಂತಲ್ಲ ರೀ, ಅದು ಪಾಂಡ್ಸ್ ಪೌಡ್ರಿಗಿಂತ ಫೇಮಸ್ ಆಗಿದೆಯಂತೆ. ನನಗೂ ತಂದ್ಕೊಡ್ರಿ, ನಾನೂ ಅದನ್ನ ಹಚ್ಕೊಂಡು ಮಿರಿ ಮಿರಿ ಮಿಂಚ್ತೀನಿ...’ ಹತ್ತಿರ ಕುಳಿತು ತಲೆ ಸವರುತ್ತಾ ಅಪ್ಲಿಕೇಷನ್ ಹಾಕಿದಳು ಹೆಂಡ್ತಿ.

‘ಆ ಮಿಣಿ ಮಿಣಿ ಪೌಡ್ರು ಹಚ್ಕೊಂಡ್ರೆ ಮಿರಿಮಿರಿ ಮಿಂಚೋದಲ್ಲ, ಇರೋ ಕೆಂಪುಮೂತಿನೂ ಸುಟ್ಟು ಕರಿ ಮಾರಿ ಆಗುತ್ತೆ’.

‘ಅಯ್ಯೋ... ಹೌದೇನ್ರೀ! ಆದ್ರೂ ಅದ್ಯಾಕಿಷ್ಟು ಫೇಮಸ್ ಆಗಿದೆ’.

ADVERTISEMENT

‘ನಮ್ ಜನಕ್ಕೆ ಬಾಂಬ್‌ಗಿಂತ ಆ ಪದವೇ ಭಯಾನಕವಾಗಿ ಕಾಣಿಸ್ತು... ಅದಕ್ಕೇ ವಿಶ್ವಪ್ರಸಿದ್ಧ ಮಾಡ್ಬಿಟ್ರು’ ಮುಗುಳ್ನಕ್ಕೆ‌.

‘ಹೋಗ್ಲಿ ಬಿಡಿ... ಮುಖ ಶೈನಿಂಗ್ ಬರೋಕೆ ಏನ್ ಮಾಡಬೇಕು ಹೇಳಿ’.

‘ನಮ್ ಇಸ್ವಗುರುಗಳೇ ಹೇಳಿಲ್ವ, ಬೆವರಬೇಕು, ಆ ಬೆವರಿಂದಾನೇ ಮಸಾಜ್ ಮಾಡ್ಕೊಂಡ್ರೆ ಮುಖ ಫಳಫಳಫಳ ಹೊಳೆಯುತ್ತೆ ಅಂತ...’

‘ನಾವೇನೋ ಬೆವರಬಹುದು ರೀ, ಈ ಎ.ಸಿ ರೂಮ್‌ನಲ್ಲಿ ಕೆಲಸ ಮಾಡೋರು, ಎ.ಸಿ ಕಾರಲ್ಲೇ ಓಡಾಡೋರು ಹೇಗೆ ಬೆವರೋಕಾಗುತ್ತೆ ಹೇಳಿ’.

‘ನಮ್ ಇಸ್ವಗುರುಗಳನ್ನೇನು ದಡ್ರು ಅಂದ್ಕೊಂಡಿದೀಯಾ... ದೇಶದ ಪ್ರತಿ ಪ್ರಜೆಯೂ ಬೆವರಬೇಕು ಹಂಗೆ ಮಾಡ್ತಾರೆ’.

‘ಹೇಗೆ?’

‘ಕಂಪನಿಗಳನ್ನ ಮುಚ್ತಾರೆ’.

‘ಆಗ ಮಾಲೀಕರು ಬೆವರ್ತಾರೆ’ ಥಟ್ ಅಂತ ಉತ್ತರಿಸಿದಳು ಅರ್ಧಾಂಗಿ.

‘ಕೆಲಸದಿಂದ ತೆಗೀತಾರೆ’.

‘ಆಗ ಉದ್ಯೋಗಿಗಳು ಬೆವರ್ತಾರೆ’.

‘ಅಕ್ಕಿ, ತರಕಾರಿ ರೇಟ್ ಜಾಸ್ತಿ ಮಾಡ್ತಾರೆ’.

‘ಆಗ ಅಮ್ಮಂದಿರು ಬೆವರ್ತಾರೆ’.

‘ಸ್ಕೂಲು, ಆಸ್ಪತ್ರೆ ಫೀಸು ಜಾಸ್ತಿ ಮಾಡ್ತಾರೆ’.

‘ಆಗ ಅಪ್ಪಂದಿರು ಬೆವರ್ತಾರೆ’.

‘ಹಿಂದಿ ಕಡ್ಡಾಯ ಮಾಡ್ತಾರೆ’.

‘ಆಗ ಕನ್ನಡದ ಮಕ್ಕಳು ಬೆವರ್ತಾರೆ’.

‘...ಹೀಗೆ ಭಾರತ ಬೆವರುತ್ತದೆ. ಫಳಫಳ ಹೊಳೆಯುತ್ತದೆ’ ನಗುತ್ತಾ ಟಿ.ವಿ ಆನ್ ಮಾಡಿದೆ.

‘ಭಾಯಿಯೋ ಔರ್ ಬೆಹನೋ... ಆಜ್ ಕೀ ರಾತ್ ಸೇ...’ ಭಾಷಣ ಶುರುವಾಯಿತು. ಇಬ್ಬರೂ ಬೆವರತೊಡಗಿದೆವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.