ADVERTISEMENT

ಚುರುಮುರಿ: ಜೈತ್ರಯಾತ್ರೆ

ಸುಮಂಗಲಾ
Published 28 ಜುಲೈ 2025, 0:12 IST
Last Updated 28 ಜುಲೈ 2025, 0:12 IST
<div class="paragraphs"><p>ಚುರುಮುರಿ: ಜೈತ್ರಯಾತ್ರೆ</p></div>

ಚುರುಮುರಿ: ಜೈತ್ರಯಾತ್ರೆ

   

‘ಬಾಪ್‌ರೇ… ನಮ್‌ ಮೋದಿ ಮಾಮಾ ರೆಕಾರ್ಡ್‌ ಮೇಲೆ ರೆಕಾರ್ಡ್‌ ಮಾಡಾಕ್ಹತ್ತಾರೆ!’ ಎಂದು ಬೆಕ್ಕಣ್ಣ ರೋಮಾಂಚನದಿಂದ ಉದ್ಗರಿಸಿತು.

‘ಇಂದಿರಾ ಗಾಂಧಿ 4,077 ದಿನ ನಿರಂತರವಾಗಿ ಪಿ.ಎಂ ಆಗಿದ್ದರಂತೆ. ಮೋದಿ ಮಾಮಾ ಮೊನ್ನೆ ಶುಭ ಶುಕ್ರವಾರ ಆ ರೆಕಾರ್ಡ್‌ ಬ್ರೇಕ್‌ ಮಾಡಿ, 4,078 ದಿನ ನಿರಂತರವಾಗಿ ಪಿ.ಎಂ ಆಗ್ಯಾರೆ…’ ಎಂದು ವರ್ಣಿಸಿತು.

ADVERTISEMENT

‘ಅಷ್ಟೇ ಯಾಕೆ… ನೋಟು ರದ್ದತಿಯಿಂದ ಹಿಡಿದು ಸಿಎಎವರೆಗೆ ಹತ್ತಾರು ಕಾಯ್ದೆಗಳು, ಕ್ರಮಗಳ ವಿಷಯದಾಗೂ ಅವರದ್ದು ರೆಕಾರ್ಡೇ ಬಿಡು’ ಎಂದೆ.

‘ನೀ ಎಲ್ಲಾದ್ರಾಗೆ ಏನರೇ ಹುಳುಕು ತೆಗಿಬ್ಯಾಡ. ಮೂರು ಸಲ ನಿರಂತರವಾಗಿ ಲೋಕಸಭಾ ಚುನಾವಣೆ ಗೆದ್ದು, ನೆಹರೂ ರೆಕಾರ್ಡೂ ಮುರಿದ್ರು. ಮೂರು ಸಲ ಸತತವಾಗಿ ಪಿ.ಎಂ ಆಗಿರೋ ಕಾಂಗ್ರೇಸ್ಸೇತರ ಪಿ.ಎಂ, ರಾಜ್ಯವೊಂದರಲ್ಲಿ ಸಿ.ಎಂ, ದೇಶದ ಪಿ.ಎಂ‌ ಎರಡೂ ಆಗಿದ್ದು… ಆಹಾ! ರೆಕಾರ್ಡ್‌ ಮ್ಯಾಲೆ ರೆಕಾರ್ಡ್!’ ಎಂದು ಎದೆಯುಬ್ಬಿಸಿತು.

‘ಈ ಹಿಂದೆ ಯಾವ ಪಿಎಮ್ಮೂ ಮಾಡಿರದಷ್ಟು ವಿದೇಶ ಯಾತ್ರೇನೂ ಮಾಡ್ಯಾರೆ ಅನ್ನೋ ರೆಕಾರ್ಡೂ ಅವರದ್ದೇ’ ಎಂದು ಹಂಗಿಸಿದೆ. 

‘ಹೌದು… ಮೋದಿ ಮಾಮಾ ಭೇಟಿ ಮಾಡದೇ ಇರೂ ರಾಷ್ಟ್ರಗಳೇ ಇಲ್ಲ! 91 ಸಲ ವಿದೇಶ ಯಾತ್ರೆ, 78 ದೇಶಗಳಿಗೆ ಭೇಟಿ… ಅಮೆರಿಕಕ್ಕೇ ಹತ್ತು ಸಲ ಹೋಗ್ಯಾರೆ!’ ಹೇಳುತ್ತಲೇ ಬೆಕ್ಕಣ್ಣ ಪುಳಕಗೊಂಡಿತು.

‘ಈ ಎಲ್ಲಾ ವಿದೇಶ ಯಾತ್ರೆಗೆ ಹೆಚ್ಚು ಕಡಿಮೆ ₹2,000 ಕೋಟಿ ಖರ್ಚಾಗೈತಿ… ಇದೂ ರೆಕಾರ್ಡೇ!’ ಎಂದೆ.

‘ತಪ್ಪೇನೈತಿ? ಅಷ್ಟೆಲ್ಲ ವಿದೇಶಯಾತ್ರೆ ಮಾಡಿದ್ದರಿಂದಲೇ ವಿಶ್ವಗುರು ಪಟ್ಟ ಸಿಕೈತಿ!  ದ್ವಿಪಕ್ಷೀಯ ಮಾತುಕತಿ ಅಂದ್ರ ಸುಮ್ಮನೇ ಏನು?’

‘ಅಲ್ಲಲೇ… ಅಷ್ಟೆಲ್ಲ ವಿದೇಶ ಯಾತ್ರೆ ಮಾಡೋರು ಮತ್ತ ದಿಲ್ಲಿಯಿಂದ ಇಮಾನದಾಗೆ ಮೂರೇ ತಾಸು ದೂರ ಇರೋ ಹೊತ್ತಿ ಉರೀತಿರೋ ಮಣಿಪುರಕ್ಕೆ ಎದಕ್ಕೆ ಹೋಗಿಲ್ಲಲೇ?’ ಎಂದೆ. ಬೆಕ್ಕಣ್ಣ ಬಾಲ ಮುದುರಿಕೊಂಡು ಹ್ಹೆಹ್ಹೆಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.