ADVERTISEMENT

ಚುರುಮುರಿ: ಹೊಸ ವರ್ಷಕ್ಕೆ...

ಬಿ.ಎನ್.ಮಲ್ಲೇಶ್
Published 22 ಡಿಸೆಂಬರ್ 2021, 19:31 IST
Last Updated 22 ಡಿಸೆಂಬರ್ 2021, 19:31 IST
   

‘ಏನ್ರಲೆ, ಹೊಸ ವರ್ಷ ಹತ್ರ ಬಂತು, ಪಾರ್ಟಿ ಎಲ್ಲಿ, ಏನ್ಕತೆ?’ ದುಬ್ಬೀರ ಹರಟೆಕಟ್ಟೆ ಗೆಳೆಯರನ್ನು ಕೇಳಿದ.

‘ಲೇಯ್, ನಮಗೆ ಹೊಸ ವರ್ಷ ಅಂದ್ರೆ ಉಗಾದಿ. ಎಣ್ಣೆ ನೀರು ಹಾಕ್ಕಂಡು ಹೋಳಿಗೆ, ವರ್ಷದಡುಕು ಮಾಡಿ ಉಂಡ ಮೇಲೇ ವರ್ಷಾರಂಭ...’ ಕೊಟ್ರೇಶಿ ವಾದಿಸಿದ.

‘ಇರ‍್ಲಿ ಬಿಡೋ... ಉಗಾದಿಗೆ ಎಣ್ಣೆ ನೀರು, ಇದಕ್ಕೆ ಎಣ್ಣೆಗೆ ನೀರು... ಅಷ್ಟೇ ವ್ಯತ್ಯಾಸ’ ಗುಡ್ಡೆ ನಕ್ಕ.

ADVERTISEMENT

‘ನಾನು ಹೊಸ ವರ್ಷದಿಂದ ಗುಂಡು ಹಾಕೋದನ್ನ ಬಿಡಬೇಕು ಅಂತ ಮಾಡೀನಪ್ಪ...’ ಸಣ್ಣೀರ ವೈರಾಗ್ಯ ಪ್ರದರ್ಶಿಸಿದ.

‘ಹೌದಾ? ಭಾರಿ ಆತಲ್ಲಲೆ, ನಾನು ಹೊಸ ವರ್ಷದಿಂದ ಟಿ.ವಿ ನ್ಯೂಸ್ ನೋಡೋದು ಬಿಡಬೇಕು ಅಂತ ಮಾಡಿದ್ದೀನಿ, ಆರೋಗ್ಯದ ದೃಷ್ಟಿಯಿಂದ...’ ತಾನೂ ಒಂದು ಸೇರಿಸಿದ ದುಬ್ಬೀರ.

‘ನಾನಂತೂ ಸಿಟ್ಟು ಸೆಡವು ಮಾಡ್ಕಳಾದು ಬಿಡಬೇಕಂತ ಮಾಡೀನಪ್ಪ...’ ಪರಮೇಶಿ ಹೇಳಿದ.

‘ಏನ್ರಲೆ, ಒಬ್ಬೊಬ್ರು ಒಂದೊಂದು ಬಿಡಂಗೆ ಕಾಣ್ತೀರಿ? ನಾನು ಈ ದರಿದ್ರ ರಾಜಕೀಯನೇ ಬಿಡಬೇಕು ಅನ್ಕಂಡಿದ್ದೀನಿ... ನೋಡಿ ನೋಡಿ ಸಾಕಾಗೇತಿ’ ಗುಡ್ಡೆ ಮುಖ ಕಿವುಚಿದ.

‘ತೆಪರ ನೀನೇನು ಬಿಡಬೇಕು ಅಂತ ಮಾಡಿದ್ದೀಯೋ?’ ಕೊಟ್ರೇಶಿ ಕೊಕ್ಕೆ ಹಾಕಿದ.

‘ಅವನು ಬಿಟ್ರೆ ಹೆಂಡ್ತೀನೇ ಬಿಡಂಗೆ ಕಾಣ್ತಾನಪ್ಪ. ತೀರಾ ದಿನಾ ಯಾವನ್ ಹೊಡ್ತ ತಿಂತಾನೆ ಅಲ್ವ?...’ ಗುಡ್ಡೆ ಕಿಚಾಯಿಸಿದ.

ತೆಪರೇಸಿಗೆ ಸಿಟ್ಟು ಬಂತು. ಆದರೂ ಕೂಲಾಗಿ ‘ಎಲ್ರೂ ಹೇಳಿದ್ದು ಮುಗೀತಾ? ನಾನೂ ಹೊಸ ವರ್ಷದಿಂದ ಒಂದು ಬಿಡಬೇಕಂತ ಮಾಡೀನಿ’ ಎಂದ.

‘ಹೌದಾ? ಏನನ್ನ?’

‘ನಿಮ್ ತರ ಸುಳ್ಳು ಹೇಳೋದನ್ನ...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.