ADVERTISEMENT

ಗುಜರಿ ನೀತಿ

ಲಿಂಗರಾಜು ಡಿ.ಎಸ್
Published 22 ಮಾರ್ಚ್ 2021, 19:31 IST
Last Updated 22 ಮಾರ್ಚ್ 2021, 19:31 IST
   

‘ಸಾ, ಹಳೇವೆಲ್ಲಾ ಮಾರಿ ಮಸಾಲೆದೋಸೆ ತಿನ್ಕಬುಡಿ, ಲಾಭ ಜಾಸ್ತಿ ಆಯ್ತದೆ ಅಂತ ಗುಜರಿ ನೀತಿ ಹೊಂಡಿಸವ್ರೆ ಗಡ್ಕರಿ ಸಯಾಬ್ರು!’ ಅಂತ ಮಾತುಕತೆ ಶುರುವಾಯ್ತು.

‘ಇವರೇಳಿದ್ರು ಅಂತ ನಾವು ಗುಜರಿಗೆ ಕೊಟ್ಟುಬುಡಬೇಕಾ? ಹಳೇವೆಲ್ಲಾ ಮಾರಬೇಕು ಅಂದ್ರೆ ನಮ್ಮಪ್ಪ-ನಮ್ಮವ್ವುನ್ನೂ ಮಾರಬೇಕಾಯ್ತದೆ’ ತುರೇಮಣೆ ವಾದ ಹೂಡಿದರು.

‘ನನ್ನ ಮೊದಲನೇ ಸಂಬಳದಲ್ಲಿ ತಕಂದಿದ್ದ ರ‍್ಯಾಲಿ ಸೈಕಲ್ನೂ ಮಾರಬೇಕ್ಲಾ?’ ರವಷ್ಟು ಆತಂಕದಲ್ಲಿ ಯಂಟಪ್ಪಣ್ಣ ಕೇಳಿತು.

ADVERTISEMENT

‘ಯಂಟಪ್ಪಣ್ಣ, 50 ವರ್ಸದ ನಿಮ್ಮ ಓಬೀರಾಯನ ಕಾಲದ ಓಲ್ಡ್ ಬ್ರಿಟಿಷ್ ರಾಯಲ್ ಸೈಕಲ್ಲಿಗೆ ಡೆತ್ ಸರ್ಟಿಪಿಕೇಟಾಗಿ ಯಾವ ಕಾಲಾಯ್ತು! ಅದುನ್ನ ಗುಜರಿಯೋರು ತಕ್ಕೋಗಕಿಲ್ಲ!’ ಅಂತ ಚಂದ್ರು ಕಿಚಾಯಿಸಿದ.

‘ನೋಡ್ಲಾ, ನನ್ನ ಕಾರ ತಕ್ಕೋಗಿ ಮಠಕ್ಕೆ ಅನುದಾನ ಅಂತ ಕೊಟ್ಬುಟ್ಟೇನು, ಆದರೆ ಬಿಲ್ಕುಲ್ ಗುಜರಿಗೆ ಕೊಡಕ್ಕಿಲ್ಲ’ ಅಂತ ಖಡಕ್ಕಾಗಿ ತುರೇಮಣೆ ಪಟ್ಟು ಹಾಕಿದರು.

‘ಅದ್ಯಾಕ್ಸಾ ಹಂಗೆ ಕಪ್ಪರಶೆಟ್ಟಿ ಹುಳದ ಥರಾ ಸುರುಟಿಗ್ಯಂತೀರಿ. ಅದೇನು ಕಾರಿನ ಮ್ಯಾಲೆ ಅಷ್ಟು ಮಮಕಾರ?’ ಅಂದೆ.

‘ಕಾರ್ ಇತಿಹಾಸ ನಿಂಗೊತ್ತಿಲ್ಲವುಲಾ? ಸಾರೀ ದುನಿಯಾ ಏಕ್ ತರಫ್‌, ಸಸುರ್‍ಕಾ ಕಾರ್ ಏಕ್ ತರಫ್‌!’ ಅಂತ ವಡಪು ಹೇಳಿತು ಯಂಟಪ್ಪಣ್ಣ.

‘ಯಂಟಪ್ಪಣ್ಣ ಚಾಡಿ ಹೇಳಬ್ಯಾಡಿ’ ತುರೇಮಣೆ ಮಾತು ಕೇಳದೆ ಯಂಟಪ್ಪಣ್ಣ ಮುಂದುವರಿಸಿತು.

‘ನೋಡ್ರೋ, ತುರೇಮಣೆಗೆ ಅವರ ಮಾವ 40 ವರ್ಸದ ಹಿಂದೆ ಕಪಾಲಿ ಉಂಗುರ, ಎಚ್‍ಎಂಟಿ ವಾಚಿನ ಜೊತೆಗೆ ಕೊಡಿಸಿದ ಹಳೇ ಮಾಡಲ್ಲು ಮಾರುತಿ ಕಾರು ಅದು. ಮಾವನ
ಸೆಂಟಿಮೆಂಟಿಗೋಸ್ಕರ ಮಾರಕ್ಕೆ ಸುತರಾಂ ಒಪ್ತಿಲ್ಲ. ಅದರ ರಿಪೇರಿಗೆ ಖರ್ಚು ಮಾಡಿದ ದುಡ್ಡಿಗೆ ವಸಾ ಅಡಾವುಡಿ ಕಾರ್ ಬಂದಿರದು’.

ತುರೇಮಣೆ ಆಗ್ಲೇ ಹಳ ಬಟ್ಟೆ ತಕಂದು ಕಾರ್ ಒರಸಕ್ಕೆ ಸುರು ಮಾಡಿದ್ರು. ಇಂತಾ ಇಂಡಿಯನ್ ಸೆಂಟಿಮೆಂಟ್ ಸೂಕ್ಷ್ಮೆಗಳೆಲ್ಲಾ ಗಡ್ಕರಿಗೆ ಗೊತ್ತಾಗಕುಲ್ಲ, ಮೋದಿಗೆ ತಿಳಿಯಕುಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.