ADVERTISEMENT

ಈರುಳ್ಳಿ ಗಣಿತ

ಮಣ್ಣೆ ರಾಜು
Published 10 ಡಿಸೆಂಬರ್ 2019, 20:15 IST
Last Updated 10 ಡಿಸೆಂಬರ್ 2019, 20:15 IST
   

ಅಂಕ ಗಣಿತ, ಬೀಜ ಗಣಿತ, ರೇಖಾ ಗಣಿತವನ್ನು ಅರೆದು ಕುಡಿದಿರುವ ಗಣಿತ ಮೇಷ್ಟ್ರು ಶಂಕ್ರಿಯವರಿಗೆ ಈರುಳ್ಳಿ ಗಣಿತ ಅರ್ಥವಾಗಲಿಲ್ಲ.

‘ನಮ್ಮ ಮನೆಗೆ ದಿನಕ್ಕೆ ಆರು ಈರುಳ್ಳಿ ಬೇಕಾಗಬಹುದು ಅಲ್ವೇ’ ಅಂದ್ರು.

‘ಆರು ಬೇಕೊ, ಹತ್ತು ಬೇಕೊ ಅನ್ನೋದು ಈರುಳ್ಳಿ ಸೈಜಿನ ಮೇಲೆ ಡಿಪೆಂಡ್ ಆಗುತ್ತೆರೀ’ ಅಡುಗೆ ಮನೆಯಲ್ಲಿ ದೋಸೆ ಸುಯ್ ಅನ್ನಿಸಿದಳು ಹೆಂಡ್ತಿ ಸುಮಿ.

ADVERTISEMENT

‘ಒಂದು ಕೆ.ಜಿಗೆ ಎಷ್ಟು ಈರುಳ್ಳಿ ಬರುತ್ತವೆ?’

‘ಅದು ಈರುಳ್ಳಿ ಸೈಜ್ ಮೇಲೆ ಡಿಪೆಂಡ್ ಆಗುತ್ತೆ’.

‘ದಿನಕ್ಕೆ ಸರಾಸರಿ 200 ಗ್ರಾಂ ಈರುಳ್ಳಿ ಬಳಸ್ತೀಯಾ ನೀನು?’

‘ಹೆಚ್ಚೂಕಮ್ಮಿ ಅಷ್ಟು ಬೇಕಾಗುತ್ತೆ’.

‘ಹಾಗಾದ್ರೆ, ಐದು ದಿನಕ್ಕೆ ಒಂದು ಕೆ.ಜಿ ಈರುಳ್ಳಿ ಬೇಕಾಗುತ್ತದೆ’ ಮೇಷ್ಟ್ರಿಗೆ ಲೆಕ್ಕ ಸಿಕ್ಕಿತು.

‘ನಾವು ಎಲ್ಲಿ ಈರುಳ್ಳಿ ಖರೀದಿಸುತ್ತೇವೆ ಅನ್ನುವುದರ ಮೇಲೆ ಡಿಪೆಂಡ್ ಆಗುತ್ತೆ’ ಅಂದಳು. ‘ಅದು ಹೇಗೆ?’ ಕೇಳಿದ ಶಂಕ್ರಿ.

‘ಹೌದು ರೀ, ಸಿದ್ಧಪ್ಪನ ಅಂಗಡೀಲಿ ಕೊಂಡರೆ ಕೆ.ಜಿಗೆ 800 ಗ್ರಾಂ ಬರುತ್ತೆ, ಮಾಯಮ್ಮನ ತಕ್ಕಡಿ ಕೆ.ಜಿಗೆ 150 ಗ್ರಾಂ ಕಮ್ಮಿ ತೂಗುತ್ತೆ. ಗಂಗಣ್ಣನ ಅಂಗಡೀಲಿ ಮುಕ್ಕಾಲು ಕೆ.ಜಿ ಬರಬಹುದು’.

‘ಇಂಪಾಸಿಬಲ್. ಒಂದು ಕೆ.ಜಿ ಹತ್ತಿ, ಒಂದು ಕೆ.ಜಿ ಕಬ್ಬಿಣದ ತೂಕ ಸಮ ಇರುತ್ತದೆ. ನಾನು ಪ್ರೂವ್‌ ಮಾಡ್ತೀನಿ’.

‘ನೀವು ಮಾಡಬಹುದು, ಆದರೆ, ಬೆಪ್ಪುತಕ್ಕಡಿಗಳು ಖರೀದಿಗೆ ಹೋದರೆ ಒಂದೊಂದು ತಕ್ಕಡಿ ಒಂದೊಂದು ತೂಕ ತೂಗುತ್ತದೆ’.

‘ನಾನು ನಿಖರವಾಗಿ ಒಂದು ಕೆ.ಜಿ ಈರುಳ್ಳಿ ತೂಗಿಸಿ ತಂದಿದ್ದೇನೆ, ಚೆಕ್ ಮಾಡು’. ‘ಮಾಡಿದೆ, ಅದರಲ್ಲಿ 8-10 ಈರುಳ್ಳಿ ಕೆಟ್ಟು ಹೋಗಿವೆ’ ಅಂದಳು. ಮೇಷ್ಟ್ರಿಗೆ ಲೆಕ್ಕ ಕನ್‌ಫ್ಯೂಸ್ ಆಯ್ತು.

‘ಈರುಳ್ಳಿ ಮತ್ತು ಸಂಸಾರ ಎರಡನ್ನೂ ಹೇಗೆ ತೂಗಿಸೋದು ಅಂತ ನಿಮಗಿಂತಾ ನನಗೆ ಚೆನ್ನಾಗಿ ಗೊತ್ತು. ತಲೆ ಕೆಡಿಸಿಕೊಳ್ಳಬೇಡಿ ತಿನ್ನಿ...’ ಎಂದು ಈರುಳ್ಳಿ ದೋಸೆ ತಂದು ಮುಂದಿಟ್ಟಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.