ADVERTISEMENT

ಆರ್ಬಿಟರ್ ಬೇಕಲ್ಲಾ!

ಲಿಂಗರಾಜು ಡಿ.ಎಸ್
Published 9 ಸೆಪ್ಟೆಂಬರ್ 2019, 20:00 IST
Last Updated 9 ಸೆಪ್ಟೆಂಬರ್ 2019, 20:00 IST
   

ತುರೇಮಣೆ ಹಾಡಿಕೊಳ್ತಾ ಇದ್ದರು ‘ಮಳೆ ನಿಂತು ಹೋದಮೇಲೆ ನೆರೆಯೊಂದು ಕಾಡಿದೆ, ಖಾತೆಯೆಲ್ಲಾ ಮುಗಿದ ಮೇಲೆ ಮುನಿಸೊಂದು ಮೂಡಿದೆ, ಹೇಳಲಿ ಹೇಗೆ ತಿಳಿಯದಾಗಿದೆ’ ಅಂತ.

‘ಇದ್ಯಾವುದು ಸಾರ್ ಹೊಸ ಹಾಡು ಹಳೇ ಟ್ಯೂನು’ ಅಂದೆ.

‘ಇದು ಯಡುರಪ್ಪಾರ ಶೋಕಗೀತೆ ಕಣಯ್ಯಾ. ಪಾಪ ಈ ವಯಸ್ಸಿನಗೂ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗತಾವರೆ. ಅವರ ಹಿಂದೆ ಡಿಸಿಎಂಗಳು, ಪಟ್ಟಶಿಷ್ಯರು, ಅನುಯಾಯಿಗಳು ಒಬ್ಬರನೂ ಕಾಣೆ’ ಅಂದರು ಲೊಚಗುಡತಾ.

ADVERTISEMENT

‘ಪಟ್ಟಶಿಷ್ಯರೇ ರಾಜಕೀಯ ಕಾರ್ಯದರ್ಶಿಗಳಾಗವರಲ್ಲಾ. ಇನ್ನೇನು ಯೋಚನೆ!’ ಅಂದೆ.

‘ಅದೇ ಕಣಪ್ಪಾ ಯೋಚನೆ! ರಾಜಕೀಯ ಕಾರ್ಯದರ್ಶಿಗಳು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅನರ್ಹ ಶಾಸಕರಿಗೆ ಕೃತಜ್ಞತೆ ಸಲ್ಲಿಸದರಗೇ ಬಿಜಿಯಾಗವರೆ. ಎಣ್ಣೆ ಮಂತ್ರಿಗಳು ಡೋರ್ ಡೆಲಿವರಿ ಕೊಡಕ್ಕೆ ಪ್ಲಾನ್ ಮಾಡಿದ್ರು. ಅದ್ಯಾಕೋ ಪ್ಲಾನ್‌ ಎಡವಟ್ಟಾಯ್ತು. ಸಾವ್ಕಾರ್‍ರು ಹೊಳಿಯಾಗೆ ಹುಣಿಸೇಹಣ್ಣು ತೊಳಿತಾವರೆ. ಮನೆಯೊಳಗಿನ ಅತೃಪ್ತರು ಕತ್ತಿ ಮಸೀತಾವರೆ. ಸಿಎಂ ಆದ್ರೂ ನೆಮ್ಮದಿ ಇಲ್ಲದಂಗಾಗದೆ’ ಅಂತ ಪರಿಸ್ಥಿತಿಯನ್ನ ಬಿಚ್ಚಿಟ್ಟರು.

‘ಸಾರ್, ವೈಟ್ ಟಾಪಿಂಗಲ್ಲಿ ಕಿಲೋಮೀಟರಿಗೆ 14 ಕೋಟಿ ಖರ್ಚು ಎಲ್ಲಾದದು ಅಂತ ಸಿಎಂ ಕೇಳವರೆ’ ಅಂತಂದೆ.

‘ನೀನು ಬೆಂಗಳೂರಲ್ಲಿ ಯಾವ ರೋಡಿಗಾದ್ರೂ ಹೋಗು ಅಲ್ಲೆಲ್ಲಾ ಅಗೆದು ಓಪನ್ ಬುಟ್ಟವರೆ. ಯಾಕೆ ಗೊತ್ತಾ? ಬೆಂಗಳೂರೇಲಿ ಕೆಂಪೇಗೌಡರ ಕಾಲದ್ದು ಕೊಪ್ಪರಿಗೆ ನಿಧಿ ಅದೆ ಅಂತ ಯಾರೋ ಸ್ವಾಮುಗೋಳು ಹೇಳಿದ್ರಂತೆ. ಅದುನ್ನ ಹುಡುಕಕ್ಕೇ ಬೆಂಗಳೂರಾದ ಬೆಂಗಳೂರೆಲ್ಲಾ ಅಗೆದಿದ್ರು. ಈಗೇನ್ಲಾ ಭ್ರಷ್ಟಾಚಾರಾನ ಎಲ್ಲಿ ಬೇಕಾದ್ರು ಬಿತ್ತಿ ದುಡ್ಡು ಬೆಳೀಬೌದು’ ಅಂತ ರಹಸ್ಯ ಹೇಳಿದರು.

‘ಹ್ಞೂನ್ಸಾರ್ ಸಿನಿಮಾ ಸಬ್ಸಿಡೀ ಕೊಡಿಸಕ್ಕೆ ಮಾಮಾಗಳು ಬಂದವರೆ. ಬ್ಯಾಂಕುಗಳು ಸೇಫು ಅಂದ್ರೆ ಅಲ್ಲೂ ಮೋಸ ಶುರುವಾಗದೆ’ ಅಂದೆ.

‘ಹ್ಞೂಂ ಕಣೋ, ಈ ದಗಾಕೋರರು ಎಲ್ಲೆಲ್ಲವುರೆ ಅಂತ ಹುಡುಕಕ್ಕೆ ಒಂದು ಆರ್ಬಿಟರ್ ಬುಡಿ ಅಂತ ನಮ್ಮ ಇಸ್ರೊ ಶಿವನ್ ಸಾರ್‍ಗೆ ಕೇಳಮು ಅಂತ’ ಅಂದ್ರು ತುರೇಮಣೆ. ಅಲ್ಲವ್ರಾ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.