ADVERTISEMENT

ಚಿದಂಬರ ರಹಸ್ಯ

ಸುಮಂಗಲಾ
Published 11 ಸೆಪ್ಟೆಂಬರ್ 2019, 4:40 IST
Last Updated 11 ಸೆಪ್ಟೆಂಬರ್ 2019, 4:40 IST
.
.   

ಬೆಕ್ಕಣ್ಣ ಲ್ಯಾಪ್‌ಟಾಪ್ ತೆರೆದಿಟ್ಟುಕೊಂಡು ಘನಗಂಭೀರವಾಗಿ ಕೂತಿತ್ತು.

‘ಏನ್ ಮಾಡಾಕಹತ್ತೀಯಲೇ’ ಕುತೂಹಲದಿಂದ ಕೇಳಿದೆ. ‘ಚಿದಂಬರ ರಹಸ್ಯ ತಿಳ್ಕೊಳಾಕ ಹತ್ತೀನಿ. ಹುಶ್... ಸುಮ್ನಿರು’ ಎಂದಿತು. ‘ತೇಜಸ್ವಿಯವರ ಚಿದಂಬರ ರಹಸ್ಯ ಕಾದಂಬರಿ ಓದಾಕ ಹತ್ತೀಯೇನು’ ಖುಷಿಯಿಂದ ಕೇಳಿದೆ. ‘ಇದು ಬ್ಯಾರೆ ಚಿದಂಬರ ರಹಸ್ಯ...’ ಎಂದಿನ ಕೊಂಕು ನಗೆ ನಕ್ಕ ಬೆಕ್ಕಣ್ಣ ವಿವರಿಸಿತು. ‘ಮೀಡಿಯಾ ಭ್ರಷ್ಟಾಚಾರ ಹಗರಣದಲ್ಲಿ ಪಂಚೆಮಾಮನನ್ನ ಮಾತ್ರ ಎದಕ್ಕ ಕಂಬಿ ಹಿಂದ ಕುಂಡ್ರಸ್ಯಾರ? ಉಳಿದವರೆಲ್ಲ ಹೆಂಗ ಕಂಬಿ ಕಿತ್ತರು? ಇದು ಮೊದಲ್ನೇ ಚಿದಂಬರ ರಹಸ್ಯ’.

‘ಅಂದ್ರೆ ಎಷ್ಟ್ ಚಿದಂಬರ ರಹಸ್ಯ ಅದಾವಲೇ?’

ADVERTISEMENT

‘ವಿಕ್ರಂ ಲ್ಯಾಂಡರ್ ಎದಕ್ಕ ಪಥ ಬಿಟ್ಟು ಹೋಗಿ, ಬ್ಯಾರೆ ಕಡಿಗಿ ಬಿತ್ತು? ಎದಕ್ಕ, ಹೆಂಗ ಸಂಪರ್ಕ ಕಡಿದುಕೊಳ್ತು? ಇಳಿಸೂ ಮುಹೂರ್ತ ತಪ್ಪಿತ್ತೇನು? ನಮ್ಮ ಚಂದ್ರಯಾನಕ್ಕ ಯಾವ ರಾಹುಕೇತುಗಳು ಬಡಕೊಂಡಾವು? ಇದು ಎರಡ್ನೇ ಚಿದಂಬರ ರಹಸ್ಯ’ ತುಸು ವಿಷಾದದಿಂದ ಹೇಳಿದ ಬೆಕ್ಕಣ್ಣ ಮುಂದುವರಿಸಿತು. ‘ನೂರು ದಿನಗಳಲ್ಲಿ ಅಗದಿ ಭಯಂಕರ ಬದಲಾವಣೆ ಮಾಡೀವಿ ನಾವು ಅಂತ ಮೋದಿಮಾಮ ಹೇಳ್ಯಾನಲ್ಲ... ಯಾವ ಬದಲಾವಣೆ, ಎಲ್ಲಿ, ಯಾರಿಗೆ ಮಾಡ್ಯಾರ? ಈ ಮೂರನೇ ಚಿದಂಬರ ರಹಸ್ಯನ ಭೂತಗನ್ನಡಿ ಹಿಡ್ಕಂಡು ಯಾರು ಹುಡುಕೋರು...’

‘ಈಗ ನೀನೂ ಬೇಕಿದ್ರ ಕಾಶ್ಮೀರಕ್ಕ ಇಲಿ ಹಿಡಿಯಾಕ ಹೋಗಿ, ಅಲ್ಲೇ ಅರಮನೆ ಕಟ್ಟಬೌದು. ಅಕ್ರಮ ಬಾಂಗ್ಲಾ ವಲಸಿಗರು ಎಲ್ಲಿದ್ರೂ ಹೊರಗ ದಬ್ಬತೀವಿ ಅಂತ ‘ಶಾ’ಣ್ಯಾ ಗುಡುಗು ಹಾಕಿ, ಎನ್‍ಆರ್‍ಸಿ ಪಟ್ಟಿ ಬಿಡುಗಡೆ ಮಾಡ್ಯಾನ. ಕಂಪನಿಗಳೆಲ್ಲ ದಿವಾಳಿ ಎದ್ದಾವು. ನಿನ್ ಮೋದಿಮಾಮ, ನಿರ್ಮಲಕ್ಕರಿಸರ್ವ್ ಬ್ಯಾಂಕಿನ ಮೀಸಲು ನಿಧಿಗೇ ಕನ್ನ ಹಾಕ್ಯಾರೆ. ಇವೆಲ್ಲ ಭಯಂಕರ ಬದಲಾವಣೆ ಅಲ್ಲೇನು... ಅದ್ರಾಗೇನ್ ಚಿದಂಬರ ರಹಸ್ಯ ಐತಲೇ’ ನಾನು ವಾದಿಸಿದೆ. ಪೆಚ್ಚಾದರೂ ಪಟ್ಟು ಬಿಡದ ಬೆಕ್ಕಣ್ಣ ‘ನೀ ವಿತಂಡವಾದ ಮಾಡಬ್ಯಾಡ. ಬದಲಾವಣೆ ಅಂದ್ರ ಸಬ್ ಕಾ ವಿಕಾಸ್...’ ಎಂದು ತಾನೇ ಭೂತಗನ್ನಡಿ ಹಿಡಿದು ಹುಡುಕತೊಡಗಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.