ADVERTISEMENT

ಚುರುಮುರಿ: ಪ್ಯಾನ್ ಇಂಡಿಯಾ ಫೈಟ್

ಮಣ್ಣೆ ರಾಜು
Published 6 ಮೇ 2022, 19:58 IST
Last Updated 6 ಮೇ 2022, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ, ಕೆಜಿಎಫ್ ಸಿನಿಮಾದ ಕಲೆಕ್ಷನ್ ಎಷ್ಟಾಯ್ತಂತೆ?’ ಸುಮಿ ಕೇಳಿದಳು.

‘ಗೊತ್ತಿಲ್ಲ, ಆದರೆ ಬಾಲಿವುಡ್ ದೊರೆಗಳು ಬೆಚ್ಚಿಬೀಳುವಷ್ಟು ಆಗಿದೆಯಂತೆ’ ಅಂದ ಶಂಕ್ರಿ.

‘ಗಣಿಯಲ್ಲಿ ಚಿನ್ನ ತೆಗೆಯುವುದಕ್ಕಿಂತ ಕೆಜಿಎಫ್‍ನಂತಹ ಸಿನಿಮಾ ತೆಗೆಯುವುದು ಲಾಭದಾಯಕ ವ್ಯವಹಾರ ಕಣ್ರೀ...’

ADVERTISEMENT

‘ಹೌದು. ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೂಳೆಬ್ಬಿಸಿದೆಯಂತೆ’.

‘ಗಣಿ ದೂಳಿಗಿಂತ ಸಿನಿಮಾ ದೂಳು ಆರೋಗ್ಯಕರ ಅಂತ ಗಣಿಧಣಿಗಳೂ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಬಹುದು’.

‘ನೆಲ ಅಗೆದಷ್ಟು ಸುಲಭವಲ್ಲ ಕಲೆ ತೆಗೆಯುವುದು. ಗಣಿಗಾರಿಕೆಗೂ ಕಲೆಗಾರಿಕೆಗೂ ವ್ಯತ್ಯಾಸವಿದೆ. ಗಣಿಯಲ್ಲಿ ಅಗೆದಷ್ಟೂ ಲಾಭ, ಸಿನಿಮಾದಲ್ಲಿ ಕಷ್ಟ’.

‘ಗಣಿಯಲ್ಲಿ ಚಿನ್ನ ಖಾಲಿಯಾಗಬಹುದು. ಆದರೆ, ಚಾಪ್ಟರ್ ಲೆಕ್ಕದಲ್ಲಿ ತಯಾರಿಸತೊಡಗಿದರೆ ಸಿನಿಮಾವೂ ನಿರಂತರ ಲಾಭ ನೀಡುವ ದುಡ್ಡಿನ ಗಣಿಯಾಗಬಹುದು’.

‘ಹೇಗೋ, ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪೈಪೋಟಿ ನೀಡಿದೆ’.

‘ಹೌದು. ಇದೂವರೆಗೆ ಬಾಲಿವುಡ್ ಸಿನಿಮಾ
ಗಳ ಸಾಮಂತರಂತಿದ್ದ ಸೌತ್ ಇಂಡಿಯಾ ಸಿನಿಮಾಗಳು ಸಾಮ್ರಾಜ್ಯ ವಿಸ್ತರಿಸಿಕೊಂಡು ಸಾಮರ್ಥ್ಯ ಬೆಳೆಸಿಕೊಳ್ಳುತ್ತಿವೆ’.

‘ನಮ್ಮ ಭಾಷೆ, ಸಿನಿಮಾಗಳು ಪ್ರಾದೇಶಿಕತೆಯ ಗಡಿ ದಾಟಿವೆ. ಉತ್ತರದ ನದಿಗಳು ದಕ್ಷಿಣಕ್ಕೆ ಹರಿಯುವಂತೆ ದಕ್ಷಿಣ ಭಾಷೆಗಳ ಸಿನಿಮಾಗಳು ಉತ್ತರಕ್ಕೆ ಹರಡುತ್ತಿವೆ. ನದಿಗಳಿಗೆ ಅಣೆಕಟ್ಟು, ಭಾಷೆಗೆ ಹಣೆಪಟ್ಟಿ ಕಟ್ಟಿ ಕಂಟ್ರೋಲ್ ಮಾಡ
ಲಾಗುವುದಿಲ್ಲ’ ಎಂದ ಶಂಕ್ರಿ.

‘ಹೌದು. ಕನ್ನಡಿಗರು ಈಗ ಕರ್ನಾಟಕದಲ್ಲಿ ಕಾಂಪೌಂಡ್ ಹಾಕಿಕೊಂಡು ಉಳಿದಿಲ್ಲ, ಗಡಿ ದಾಟಿ ಹೋಗಿ ಹೊರ ರಾಜ್ಯ, ಹೊರ ದೇಶಗಳಲ್ಲೂ ವಿಸ್ತರಿಸಿಕೊಂಡಿದ್ದಾರೆ. ಕನ್ನಡ ಭಾಷೆ, ಕನ್ನಡ ಸಿನಿಮಾಗಳು ಭಾಷಾಂತರ, ದೇಶಾಂತರಗೊಳ್ಳುತ್ತಿವೆ’.

‘ಪ್ರಾದೇಶಿಕತೆಯ ಚೌಕಟ್ಟು ಮೀರಿ ಬೆಳೆಯುತ್ತಿರುವ ಕನ್ನಡವೂ ದೇಶದೆಲ್ಲೆಡೆ ತಲುಪುತ್ತಿದೆ ಅಂತನಾ?’

‘ಹಾಗಲ್ಲಾ, ಕನ್ನಡಕ್ಕೆ ಚೌಕಟ್ಟು ಹಾಕಿ ಹಿಂದಿ ಹೇರುವ ಪ್ರಯತ್ನವನ್ನು ಇನ್ನಾದರೂ ಕೈಬಿಡಬೇಕು...’ ಎಂದು ಸುಮಿ ಒತ್ತಾಯಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.