ADVERTISEMENT

ದೇವರ ಮುಂದೆ ರಾಜಕಾರಣಿಗಳ ಹಕ್ಕೊತ್ತಾಯ | ಸಿಎಂ ಕುರ್ಚಿ ಬ್ರಹ್ಮನಿಗೂ ಕಗ್ಗಂಟು!

ಸುಮಂಗಲಾ
Published 22 ಜುಲೈ 2019, 2:28 IST
Last Updated 22 ಜುಲೈ 2019, 2:28 IST
   

ಚಾಮುಂಡೇಶ್ವರಿಗೆ ತಲೆಕೆಟ್ಟು ಹೋಯಿತು. ಆಷಾಢದ ಎರಡನೇ ಶುಕ್ರವಾರವೆಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ ನಿಜ
ಭಕ್ತಾದಿಗಳ ಮೊರೆ ಕೇಳುವುದೋ ಅಥವಾ ಬರಿಗಾಲಲ್ಲಿ ಬೆಟ್ಟವೇರಿ ಬಂದ ಶೋಭಕ್ಕನನ್ನು ನೋಡುವುದೋ ಅಥವಾ ನಾನೇನು ಕಡಿಮೆಯೆಂದು ಬೆಟ್ಟ ಹತ್ತಿದ ಮೇಲೆ, ಪಂಚೆಯೆತ್ತಿ ಬರಿಗಾಲು ತೋರಿಸುತ್ತ ಬಂದ ನಿಂಬೆಯಣ್ಣನತ್ತ ತಿರುಗುವುದೋ...

ಪಾಪದ ನಿಜಭಕ್ತಾದಿಗಳೇನೋ ಪುಡಿ ಬೇಡಿಕೆಗಳನ್ನಿಟ್ಟಿದ್ದರು. ಆದರೆ ಶೋಭಕ್ಕ, ನಿಂಬೆಯಣ್ಣ ಇಬ್ಬರದೂ ಒಂದೇ ಬೇಡಿಕೆ. ಶೋಭಕ್ಕ ‘ನಮ್ಮ ಕಡೇವ್ರಿಗೆ ಮುಖ್ಯಮಂತ್ರಿ ಕುರ್ಚಿ ದಯಪಾಲಿಸವ್ವ’ ಎಂದು ಹಕ್ಕೊತ್ತಾಯದಿಂದ ಬೇಡಿದರೆ, ನಿಂಬೆಯಣ್ಣ ‘ಮುಖ್ಯಮಂತ್ರಿ ಕುರ್ಚಿ ತಮ್ಮಣ್ಣನ ಕೈತಪ್ಪಿಸಿದರೆ ನೋಡು ಮತ್ತೆ ನಿನ್ನ ಗತಿ’ ಎಂದು ಹ್ಞೂಂಕರಿಸಿ ಹೇಳಿದ.

ಇಬ್ಬರೂ ಗಡುವು ವಿಧಿಸಿದ್ದಾರೆ. ಬಡಗಿಗೆ ಹೇಳಿ ಎರಡು ಮುಖ್ಯಮಂತ್ರಿ ಕುರ್ಚಿ ಕೆತ್ತಿಸಿ ನಿಧಾನಸೌಧದಲ್ಲಿಟ್ಟರೆ ಹೇಗೆ...? ತಲೆ ಕೆಟ್ಟ ಚಾಮುಂಡಿ, ಬ್ರಹ್ಮನ ಬಳಿ ಹೋದಳು. ಅಲ್ಲಾಗಲೇ ಶೃಂಗೇರಿ ಶಾರದಾಂಬೆಯಿಂದ ಹಿಡಿದು ಕೊಲ್ಲೂರ ಮೂಕಾಂಬಿಕೆಯವರೆಗೆ ಎಲ್ಲ ದೊಡ್ಡ ದೇವಸ್ಥಾನಗಳ ದೇವಮೂರ್ತಿಗಳು ಅರ್ಜಿ ಹಿಡಿದು ನಿಂತಿದ್ದರು. ಎಲ್ಲರದೂ ಒಂದೇ ಗೋಳು. ‘ಎರಡು ಮೂರು ಪಕ್ಷದವರು ಬರ್ತಾರೆ, ಎಲ್ಲರೂ ಮಂತ್ರಿ ಕುರ್ಚಿಗಾಗಿ ಪ್ರಾರ್ಥನೆ ಮಾಡ್ತಾರೆ. ಬಲಕ್ಕೆ ಹೂ ಉದುರಿಸಲಿಲ್ಲ ಅಂದ್ರೆ ಕ್ಯಾಕರಿಸಿ ಉಗೀತಾರೆ. ದೇವಸ್ಥಾನಕ್ಕೆ ಬಂದ ರಾಜಕಾರಣಿಗೆ ಕುರ್ಚಿ ಕೈತಪ್ಪೋ ಹಂಗೆ ಶಾಪ ಕೊಡು ಅಥವಾ ಒಂದೊಂದು ಪಕ್ಷಕ್ಕೆ ಒಂದೊಂದು ದೇವಸ್ಥಾನ ಅಂತ ಫಿಕ್ಸ್ ಮಾಡು. ನಮಗೆ ಸಾಕಾಗಿಬಿಟ್ಟಿದೆ...’

ADVERTISEMENT

ಬ್ರಹ್ಮ ಗಾಬರಿಯಾದ. ‘ದೇವಸ್ಥಾನ ನನ್ನ ಕೈಯಲ್ಲಿಎಲ್ಲಿದೆ? ಅದೆಲ್ಲ ಮುಜರಾಯಿ ಇಲಾಖೆಯವರದ್ದು’. ದೇವಮೂರ್ತಿಗಳನ್ನು ಸಮಾಧಾನಿಸುವಷ್ಟರಲ್ಲಿ ಹತ್ತಾರು ಬಗೆಯ ಕಮಲಗಳು ಓಡೋಡಿ ಬಂದವು. ‘ಆಪರೇಶನ್ ಕಮಲ ಅಂತ ಕೇಳಿ ಕೇಳಿ ಸಾಕಾಗಿದೆ. ನಮಗೆ ಕಮಲ ಅನ್ನೋ ಹೆಸರೇ ಬೇಡ. ಮೊದ್ಲು ನಮ್ಮ ಹೆಸರು ಬ್ಯಾರೆ ಇಡು ದೇವಾ’. ಇದೀಗ ಬ್ರಹ್ಮನೂ ತಲೆ ಮೇಲೆ ಕೈಹೊತ್ತು ಕೂತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.