ADVERTISEMENT

ಗೋಡೆ ಮತ್ತು ಗೋಡ್ಸೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 20:01 IST
Last Updated 27 ಫೆಬ್ರುವರಿ 2020, 20:01 IST
ಚುರುಮುರಿ
ಚುರುಮುರಿ   

‘ಗುರೂ... ಮೊನ್ನೆ ಭಾರತಕ್ಕೆ ಟ್ರಂಪ್ ಬಂದಿದ್ರಲ್ಲ, ಗೋಡ್ಸೆ ಅಥ್ವಾ ಗುಜರಾತ್‍ನ ಗೋಡೆ ಬಗ್ಗೆ ಅವ್ರು ‘ನಮೋ’ ಸಾಹೇಬ್ರಿಗೆ ಏನೂ ಕೇಳಲಿಲ್ವಂತಾ?’

‘ಪಾಪ, ಅವರು ಎರಡೂ ಒಂದೇ ಅಂತ ತಿಳ್ಕಂಡಿರಬೇಕು. ಕಾರಲ್ಲಿ ಬರುವಾಗ ಕೊಳೆಗೇರಿ ಕಾಣದಂಗೆ ಕಟ್ಟಿದ್ದ ಗೋಡೆ ನೋಡಿ ‘ವ್ಹಾವ್, ನೀವು ಗೋಡ್ಸೆನ ತುಂಬ ಸ್ಟ್ರಾಂಗಾಗಿ ಕಟ್ಟಿದೀರಿ. ಚೀನಾದಲ್ಲೂ ಇಂಥ ಗೋಡ್ಸೆ ಇರಬೇಕಲ್ಲ?’ ಅಂತ ಕೇಳಿದ್ರಂತೆ. ನಮೋ ಸಾಹೇಬ್ರು
ಪಿಟಕ್ಕೆನ್ನಲಿಲ್ವಂತೆ’

‘ಒಳ್ಳೆ ಕತೆ, ಆಮೇಲೆ ಗಾಂಧಿ ಆಶ್ರಮಕ್ಕೆ ಹೋಗಿದ್ರಲ್ಲ, ಅಲ್ಲೇನಾತಂತೆ?’

ADVERTISEMENT

‘ಅಲ್ಲಿದ್ದ ಚರಕ ಮತ್ತು ಗಾಂಧೀಜಿಯ ಮೂರು ಮಂಗಗಳನ್ನ ನೋಡಿದ ಟ್ರಂಪ್ ಹೆಂಡ್ತಿ ‘ರೀ... ಈ ಮಂಗಗಳು ಎಷ್ಟು ಕ್ಯೂಟಾಗಿದಾವೆ. ಅಮೆರಿಕಕ್ಕೆ ತಗಂಡು ಹೋಗೋಣ್ವ?’ ಅಂತ ಕೇಳಿದ್ರಂತೆ. ಅದಕ್ಕೆ ಟ್ರಂಪು ‘ನಮ್ಮೂರಲ್ಲೇ ಬೇಕಾದಷ್ಟು ಮಂಗಗಳಿದಾವೆ, ಬೇಡ’ ಅಂದ್ರಂತೆ.’

‘ಹೌದಾ? ಆಮೇಲೆ?’

‘ತಾಜ್‍ಮಹಲ್ ನೋಡಿದ ಟ್ರಂಪ್ ಹೆಂಡ್ತಿ ‘ವಂಡರ್‍ಫುಲ್, ಮಾರ್ವಲಸ್, ಇದಂತೂ ನಂಗೆ ಬೇಕೇಬೇಕು’ ಅಂತ ಹಟ ಹಿಡಿದ್ರಂತೆ. ಆಗ ಮೋದಿ ಅಲ್ಲೇ ಗಿಫ್ಟ್ ಅಂಗಡೀಲಿದ್ದ ಸಣ್ಣ ಮಾರ್ಬಲ್ ತಾಜ್‍ಮಹಲನ್ನ ಕೊಟ್ಟು ‘ಸದ್ಯ ಇದನ್ನ ಇಟ್ಕಂಡಿರಿ. ನೀವು ಊರಿಗೆ ಹೋದ ಮೇಲೆ ಒರಿಜಿನಲ್ ಕಳಿಸಿಕೊಡ್ತೀನಿ’ ಅಂತ ಸಮಾಧಾನ ಮಾಡಿದ್ರಂತೆ.’

‘ಸರಿಹೋಯ್ತು, ಮತ್ತೆ ಎಲ್ಲೆಲ್ಲಿಗೆ ಅವರು ಭೇಟಿ ನೀಡಿದ್ರಂತೆ?’

‘ಮೈಸೂರು ಅರಮನೆ, ಚಾರ್‍ಮಿನಾರ್, ಗೋಲ್ಡನ್ ಟೆಂಪಲ್ ಅಲ್ಲಿಗೆಲ್ಲ ಕರ್ಕಂಡ್ ಹೋಗ್ಲಿಲ್ಲಂತೆ. ಟ್ರಂಪ್ ಹೆಂಡ್ತಿ ಅದನ್ನೆಲ್ಲ ಗಿಫ್ಟ್ ಕೊಡಿ ಅಂತ ಕೇಳಿದ್ರೆ ಕಷ್ಟ ಅನ್ಕಂಡು ಕ್ಯಾನ್ಸಲ್ ಮಾಡಿದ್ರಂತೆ. ವಾಪಸ್ ಅಮೆರಿಕಕ್ಕೆ ಹೋಗುವಾಗ ಟ್ರಂಪ್ ಹೆಂಡ್ತಿ ನಮೋ ಸಾಹೇಬ್ರ ಕಿವಿಯಲ್ಲಿ ಏನೋ ಕೇಳಿದ್ರಂತೆ...’

‘ಹೌದಾ ಏನ್ ಕೇಳಿದ್ರಂತೆ?’

‘ಅದೆಂಥದೋ ಣಿಮಿ ಣಿಮಿ ಪೌಡರ್ ಇದೆಯಂತಲ್ಲ, ಎಲ್ಲಿ ಸಿಗುತ್ತೆ?’ ಅಂತ ಕೇಳಿದ್ರಂತೆ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.