ADVERTISEMENT

ಚುರುಮುರಿ| ಖಯಾಲಿ ಕಾಯಿಲೆ

ಮಣ್ಣೆ ರಾಜು
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST
ಚುರುಮುರಿ
ಚುರುಮುರಿ   

‘ರೀ, ಕೊರೊನಾ ಬಂತು, ಈಗೇನೋ ಕ್ಯಾಸಿನೊ ಅಂತ ಬರ್ತಿದೆಯಂತೆ, ಇದೂ ಒಂದು ಕಾಯಿಲೆನಾ?’ ಸುಮಿ ಕೇಳಿದಳು.

‘ಹೌದು, ಜೂಜಾಟದ ಖಯಾಲಿ ಕಾಯಿಲೆ. ಫಾರಿನ್‍ನಲ್ಲಿ ಇಂಥಾ ಕ್ಯಾಸಿನೊಗಳು ಇವೆಯಂತೆ. ನಮ್ಮವರು ಅಲ್ಲಿಗೆ ಹೋಗಿ ಜೂಜಾಡಿ ದುಡ್ಡು ಕಳೆದುಕೊಂಡು ಬರ್ತಾರಂತೆ. ದುಡ್ಡು ಕಳೆದುಕೊಳ್ಳಲು ಫಾರಿನ್ನಿಗೆ ಯಾಕೆ ಹೋಗಬೇಕು, ಇಲ್ಲೇ ಕಳೆದುಕೊಳ್ಳಲಿ ಅಂತ ನಮ್ಮಲ್ಲೂ ಕ್ಯಾಸಿನೊ ತೆರೆದರೆ ಹೆಂಗೆ ಅನ್ನೋ ಚರ್ಚೆ ನಡೀತಾ ಇದೆ’ ಅಂದ ಶಂಕ್ರಿ.

‘ಫಾರಿನ್ ಟೂರಿಸ್ಟ್‌ಗಳು ಜೂಜಾಡಲೆಂದೇ ಟೂರು ಬರ್ತಾರಾ?’

ADVERTISEMENT

‘ಮತ್ತೇನು, ನಮ್ಮಲ್ಲಿನ ಗಿಡಮರ, ಕಾಡು, ನದಿ, ಸಮುದ್ರ ನೋಡಿ, ಗುಡಿ-ಗೋಪುರ ದರ್ಶನ ಮಾಡಿ, ಚೆರ್ಪು ತಿನ್ನಲು ಬರ್ತಾರಾ ಅಂತ ಟೂರಿಸಂ ಜನ ಹೇಳ್ತಾರೆ’.

‘ಹಾಗಾದ್ರೆ, ಕ್ಯಾಸಿನೊಗಳಲ್ಲಿ ಮದ್ಯದಂಗಡಿಗಳನ್ನೂ ತೆರೆಯಬೇಕಾಗುತ್ತದೆ ಅಲ್ವಾ?’

‘ಹೌದು, ಮೋಜಿಗೆ ಮತ್ತೇರಬೇಕಲ್ಲ. ಅದರಲ್ಲೂ ಈಗ ಅಬಕಾರಿಗೆ ಕಸ್ಟಮರ್ ಕಮ್ಮಿ ಆಗಿ, ವ್ಯಾಪಾರ ಡಲ್ ಆಗಿದೆಯಂತೆ. ಅಬಕಾರಿ ಭಿಕಾರಿಯಾದರೆ ಸರ್ಕಾರ ನಡೆಸೋದು ಹೇಗೆ, ಎಣ್ಣೆಯಿಂದಲ್ಲವೇ ಸರ್ಕಾರಿ ಚಕ್ರ ಉರುಳೋದು’.

‘ಬಿಸಿನೆಸ್ ಇಂಪ್ರೂ ಮಾಡ್ಬೇಕು ಅಂತ ಮನೆ ಬಾಗಿಲಿಗೆ ಎಣ್ಣೆ ಹಂಚಲು ಈ ಮೊದಲು ಚಿಂತನೆ ನಡೆದಿತ್ತು ಅಲ್ಲವೇನ್ರೀ?’

‘ಹೌದು, ಜನ ಬಾಗಿಲು ತೆರೆಯೋದಿಲ್ಲ ಅಂದಿದ್ದಕ್ಕೆ ಚಿಂತನೆ ತೆಪ್ಪಗಾಯ್ತು. ಕ್ಯಾಸಿನೊ ತೆರೆದುಕೊಂಡ್ರೆ ಫಾರಿನ್ ಕಸ್ಟಮರ್ಸ್‌ ಸಿಗ್ತಾರೆ ಅನ್ನೋ ಆಸೆ ಎಣ್ಣೆ ಇಲಾಖೆಗೆ. ಯಾವುದೇ ವ್ಯವಹಾರ ಕುದುರಬೇಕೆಂದರೆ ಹೊಸ ಗ್ರಾಹಕರನ್ನು ಸೃಷ್ಟಿ ಮಾಡಿಕೊಳ್ಳಬೇಕಲ್ವೇ?’

‘ಕಸ್ಟಮರ್ ಕ್ರಿಯೇಟ್ ಮಾಡ್ತೀವಿ ಅಂತ ಶಾಲಾ ಕಾಲೇಜು ಮಕ್ಕಳಿಗೆ ಕ್ಷೀರ ಭಾಗ್ಯದ ಬದಲು ಎಣ್ಣೆ ಭಾಗ್ಯ ಜಾರಿ ಮಾಡಿಬಿಟ್ಟಾರು ರೀ’ ಸುಮಿಗೆ ಆತಂಕ.

‘ಹಾಗೆಲ್ಲಾ ಮಾಡಲ್ಲಬಿಡು, ಸರ್ಕಾರಕ್ಕೂ ಮಕ್ಕಳಪ್ರೇಮ ಇದೆ. ಎಣ್ಣೆಯಿಂದಲೇ ಮಕ್ಕಳು ಕೆಡ್ತಾರೆ ಅನ್ನೋ ಆತಂಕ ಬೇಡ, ಮೊಬೈಲ್ ನೋಡಿಕೊಂಡೂ ಕೆಡುತ್ತಿದ್ದಾರಲ್ಲ’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.