ADVERTISEMENT

ಚುರುಮುರಿ | ಪ್ರಜಾ ಸತ್ತಾ

ಲಿಂಗರಾಜು ಡಿ.ಎಸ್
Published 27 ಜುಲೈ 2020, 20:58 IST
Last Updated 27 ಜುಲೈ 2020, 20:58 IST
ಚುರುಮುರಿ
ಚುರುಮುರಿ   

‘ಮನಸ್ಸಿಗೆ ಯದಾರಾಗದೆ ಕನೋ! ಹ್ಯಂಗೋ ಕಷ್ಟಕ್ಕಿರಲಿ ಅಂತ ಚೂರುಪಾರು ಮಾಡಿಕಂಡಿರತೀವಿ. ಅದ್ನೂ ತಕ್ಕೋಗಿ ಕೊಟ್ಬುಡದಾ!’ ಅಂದ್ರು ತುರೇಮಣೆ. ‘ಕರೆಟ್ಟು ಸಾ, ರಾಜಕಾರಣಿಗಳು ಲೆಕ್ಕದ ಕುರುಕ್ಷೇತ್ರದೇಲಿ ಕತ್ತಿ ಹಿರಿದು ನಿಂತವ್ರೆ. ಕೊರೊನಾ ಕಷ್ಟದ ಟೇಮಲ್ಲಿ ಆಡಳಿತ- ವಿರೋಧ ಪಕ್ಸಗಳು ಗಂಡ-ಹೆಂಡ್ತಿ ಥರಾ ಕೂಡಿ ಕಷ್ಟಕ್ಕೆ ಎದೆ ಕೊಡಬೇಕಲ್ಲವ್ರಾ ಸಾ’.

‘ಲೇಯ್, ನಿನಿಗೆ ನಾನೇಳದು ಅರ್ಥವೇ ಆಯ್ತಿಲ್ಲ ಕಲಾ! ಈಗ ಐದು ಸಾವಿರಾಗದೆ, ನಾಳಿಕೆ ಎಷ್ಟಾದದೋ ಗೊತ್ತಿಲ್ಲ?’ ಅಂದ್ರು. ‘ಓ ಸಾ, ನೀವು ಬೆಂಗಳೂರು ಸುಸ್ತು ಪ್ರದರ್ಶನ ಕೊರೊನಾ ಕೇರ್ ಬೆಡ್ಡು ಕಥೆ ಹೇಳತುದರಿ! ಅವಸರಕ್ಕೆ ಅಂತ ಐದು ಸಾವಿರ ಬೆಡ್ಡು ರೆಡಿಯಾಗ್ಯದಂತೆ ಕೊರೊನಾ ಮುಗಿಯೋವೊತ್ತಿಗೆ ಪೂರ್ತಿ ರೆಡಿಯಾಯ್ತದೆ ಬುಡಿ ಸಾ’.

‘ಬರೀ ಸಾಹಿತ್ಯನೇ ಹೇಳತೀಯಲ್ಲೋ. ನನ್ನ ನೋವು ಯಾರಿಗೂ ಅರ್ಥಾಯ್ತಿಲ್ಲ!’ ಅಂತ ನಿಟ್ಟುಸಿರುಬುಟ್ಟರು. ‘ಸಾಹಿತ್ಯಕೋಟಾದಗೆ ಹಕ್ಕಿ ಹಾಡಿಕ್ಯಂಡು ದಿಬ್ಬಣ ಹೊಂಟದೆ! ಇನ್ನು ಗ್ಯಾನಪೀಠ ಖಾತೆ ಮಂತ್ರಿ ಗ್ಯಾರೆಂಟಿ!’

ADVERTISEMENT

‘ಕೆತ್ತೆಬಜೆ ನನ್ಮಗ ನೀನು. ಸಾಹಿತ್ಯಕ್ಕೂ ಹಕ್ಕಿಗೂ ಸಂಬಂಜ ಇಲ್ಲ ಅಂತ ಇವಾದ ಆಗ್ಯದೆ! ನಾನೇಳ್ತಾ ಇರದೇ ಬ್ಯಾರೆ ಕಲಾ. ಟಿವಿನಗೆ ಹಳೇ ಈರೋ, ಈರೋಯಿನ್ನುಗಳು ಬಂದೂ ಬಂದೂ ‘ಮನೇಲಿರದು, ಬಚ್ಚಿಟ್ಟಿರದು, ಅಡವಿಟ್ಟಿರದು ಚಿನ್ನ ತಕ್ಕಬಂದು ನಮ್ಮ ಕಂಪನೀಗೇ ಮಾರಿ ಸಾಲ ತಗಳಿ’ ಅಂತ ಬೆಳಗ್ಗಿಂದಾ ಸಂದೇಗಂಟಾ ಕುಯ್ತರೆ ಕನೋ. ಕಷ್ಟಕ್ಕಾಗಲಿ ಅಂತ ಮಡಗಿರ್ತೀವಿ, ಅದುನ್ನೂ ಮಾರಿ ಮಸಾಲೆ ದೋಸೆ ತಿಂದುಕಳನೇ? ಟಿವಿ ವದರಿಗಾರರು ವತ್ತಾರೆಗೆ ಕೊರೊನಾಕ್ಕೆ ಸಮಾಧಿ ಫಿಕ್ಸ್ ಅಂತರೆ. ಮದ್ಯಾನ್ನಕ್ಕೆ ಮದ್ದೇ ಬಂದಿಲ್ಲ ಅಂತರೆ. ಇನ್ನೂ ಘೋರ ಖಾಯಿಲೆ ಬತ್ತಾ ಅವೆ ಅಂತ ರಾತ್ರಿಕೆ ನಿದ್ದೆಗೆಡಸ್ತರೆ! ಬದುಕಿದ್ರೆ ಪಂಚೆ ಪ್ರಶ್ನೆ ಕಾಟ, ಸತ್ರೆ ಒಪ್ಪ ಮಾಡೋರಿಲ್ಲ’ ಅಂದ್ರು.

‘ಬುಡಿ ಹೋಗಲಿ! ಕೊರೊನಾ ವಾರ್ಷಿಕೋತ್ಸವಕ್ಕೆ ನಿಮ್ಮ ಸಂದೇಶ ಏನು?’ ಅಂದೆ.
‘ಪ್ರಜಾ ಸತ್ತಾ’ ಅನ್ನದಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.