
ವಿಧಾನಸೌಧದ ಹೊರಗೆ ನಾಡುಪ್ರಾಣಿಗಳೆಲ್ಲ ತುರ್ತು ಸಭೆ ಸೇರಿದ್ದವು. ಎತ್ತು, ಎಮ್ಮೆ, ಹೆಗ್ಗಣ, ಕುದುರೆ, ಕೋತಿ, ನಾಯಿಗಳೆಲ್ಲ ಗಂಭೀರವದನರಾಗಿ ತಮ್ಮ ತಮ್ಮ ಕುರ್ಚಿಗಳಲ್ಲಿ ಆಸೀನರಾಗಿದ್ದವು.
ಕತ್ತೆ ಎದ್ದು ನಿಂತು ಏಕಾಏಕಿ ಕೋತಿ, ನಾಯಿಯನ್ನು ತರಾಟೆಗೆ ತೆಗೆದುಕೊಂಡಿತು.
‘ಅಲ್ರೋ, ನಿಮಗೆ ಮಾನ ಮರ್ವಾದೆ ಇಲ್ವಾ? ನೀವ್ಯಾಕ್ರೋ ಮೊನ್ನೆ ಇಧಾನಸೌಧಕ್ಕೆ ಹೋಗಿದ್ರಿ? ಜನ ನಮ್ ಬಗ್ಗೆ ಏನ್ ತಿಳ್ಕಳಲ್ಲ... ಥೂ, ನಿಮ್ ಜನ್ಮಕ್ಕೆ...’ ಎಂದಿತು.
‘ಎಲ್ಲ ಸುಳ್ಳು, ನಾವ್ಯಾಕೆ ಅಲ್ಲಿಗೆ ಹೋಗ್ತೀವಿ? ನಾವೇನು ಕಳ್ರಾ ಸುಳ್ರಾ? ಅಥ್ವ ಅಪಾಪೋಲಿಗಳಾ?’ ಕೋತಿ, ನಾಯಿ ವಾದಿಸಿದವು.
‘ಮತ್ತೆ ಎಲ್ಲ ಕಡೆ ಸುದ್ದಿ ಹೆಂಗಾತು? ನಿಮ್ಮನ್ನ ಛೀ, ಥೂ ಅಂತ ಉಗಿದ್ರಂತೆ?’
‘ಅವ್ರು ಹೋಗಿಲ್ಲ ಬಿಡಪ್ಪ... ಅದೂ ಎಮ್ಮೆಲ್ಲೆಗಳು ಅವರವರೇ ಮಾತಲ್ಲಿ ಒಬ್ಬರಿಗೊಬ್ರು ಮುದ್ದಾಡಿಕಂಡ್ರಂತೆ...’ ಎಮ್ಮೆ, ನಾಯಿ ಪರ ವಹಿಸಿತು.
‘ಓ... ಎಮ್ಮೆಲ್ಲೆ ಪದದಲ್ಲಿ ಎಮ್ಮೆ ಇದೆ ಅಂತ ನೀನು ಅವರ ಪರ ವಾದಿಸ್ತೀಯ?’ ಕತ್ತೆಗೆ ಸಿಟ್ಟು ಬಂತು.
‘ಈಗ ನಾಯಿ, ಕೋತಿ ಇಧಾನಸೌಧಕ್ಕೆ ಹೋಗಿದ್ದಕ್ಕೆ, ಎಮ್ಮೆಲ್ಲೆಗಳು ಅವ್ರನ್ನ ಬೈದಿದ್ದಕ್ಕೆ ನಿನ್ನತ್ರ ಸಾಕ್ಷಿ ಏನಿದೆ?’ ಕುದುರೆ ಪ್ರಶ್ನಿಸಿತು.
‘ಓ... ಕುದುರೆ ವ್ಯಾಪಾರ ಅಂತ ಯಾಕಂತಾರೆ ಈಗ ಗೊತ್ತಾತು. ನೀನೂ ಎಮ್ಮೆಲ್ಲೆಗಳ ಕಡೇನೆ...’ ಎಂದು ಕತ್ತೆ ನಕ್ಕಿತು.
‘ಈಗ ವಾಗ್ವಾದ ಬೇಡ, ನಮ್ಮ ನಾಯಿ, ಕೋತಿ ಇಧಾನಸೌಧಕ್ಕೆ ಹೋಗಿಲ್ಲ, ಆದ್ರೂ ಅವ್ರು ಇವ್ರನ್ನ ಬೈದಿದಾರೆ. ಇದನ್ನ ಖಂಡಿಸೋಣ’ ಎಂದಿತು ಎತ್ತು.
‘ಕರೆಕ್ಟ್, ಇದು ದ್ವೇಷ ಭಾಷಣಕ್ಕೆ ಸಮ. ಸ್ಪೀಕರ್‌ಗೆ ದೂರು ಕೊಡೋಣ’ ಎಂದಿತು ಹೆಗ್ಗಣ.
‘ಓಕೆ, ಬೊಗಳೋದು ನಾಯಿಗಳ ಹಕ್ಕು, ಮರದಿಂದ ಮರಕ್ಕೆ ಹಾರೋದು ಕೋತಿಗಳ ಹಕ್ಕು. ಇದನ್ನು ಬೇರೆಯವರು ಮಾಡಕೂಡದು. ಮಾಡಿದ್ರೆ ಇಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು...’ ಕತ್ತೆ ರೂಲಿಂಗ್ ಕೊಟ್ಟಿತು. ಸಭೆ ಬರಕಾಸ್ತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.