ADVERTISEMENT

ಚುರುಮುರಿ | ಬೆಕ್ಕಣ್ಣನ ಬುದ್ಧಿವಾದ

ಸುಮಂಗಲಾ
Published 26 ಜುಲೈ 2020, 20:49 IST
Last Updated 26 ಜುಲೈ 2020, 20:49 IST
ಚುರುಮುರಿ
ಚುರುಮುರಿ   

ಮಾರ್ಚ್ ತಿಂಗಳಿನಲ್ಲಿ ಬೆಕ್ಕಣ್ಣ ‘ನಮ್ಮ ಕೇಂದ್ರ ಆರೋಗ್ಯ ಸಚಿವ ಹರ್ಷಣ್ಣಾರು ಹೇಳ್ಯಾರ, ಕಾಯಿಲೆಕಸಾಲೆ ಇಲ್ಲದಿದ್ದವರಿಗೆ ಮಾಸ್ಕೇನೂ ಬ್ಯಾಡಂತ. ನನಗೆದಕ್ಕೆ ಮಾಸ್ಕು’ ಎಂದು ಉಂಡಾಡಿ ಗುಂಡನಾಗಿ ಓಡಾಡಿಕೊಂಡಿತ್ತು.

ಮೇ ತಿಂಗಳಲ್ಲಿ ‘ಎಲ್ಲಾರೂ ಛಲೋ ಮಾಸ್ಕ್ ಹಾಕ್ಕೋಬೇಕು ಅಂತ ವಿಶ್ವಸಂಸ್ಥೆಯವರೇ ಹೇಳ್ಯಾರ. ನನಗೂ ಒಂದ್ ಎನ್– 95 ಮಾಸ್ಕ್ ತರ್ಸಿಕೊಡು. ಉಸಿರಾಡಾಕ ಅದೇನೋ ರೆಸ್ಪಿರೇಟರಿ ವಾಲ್ವ್ ಇರ್ತದಂತಲ್ಲ ಅಂಥದ್ದೇ ಬೇಕು’ ಎಂದು ರಗಳೆ ಮಾಡಿ ಒಂದಿಷ್ಟು ತರಿಸಿಕೊಂಡಿತು.

ಮೊನ್ನೆ ಮತ್ತೆ ವರಾತ ಹಚ್ಚಿಕೊಂಡಿತು, ‘ಇದೇನೋ ಸರಿಯಿಲ್ಲಂತ... ಹರ್ಷಣ್ಣಾರು ಹೇಳ್ಯಾರ, ಮೂರು ಮಡಿಕೆ ಇರೋ ಹತ್ತಿ ಮಾಸ್ಕ್ ಛಲೋ ಅಂತ... ಅದೇ ತರಿಸಿಕೊಡು’.

ADVERTISEMENT

ಬೆಕ್ಕಣ್ಣ ಆರಂಭದಲ್ಲಿ ‘ಕೊರೊನಾಗೆ ಗಾಳ್ಯಾಗೆ ತೇಲಾಡತಾ ಇರಕೆ ಶಕ್ತಿ ಇಲ್ಲಂತ. ಕೊರೊನಾ ಪೀಡಿತರು ಸೀನಿದ್ರೆ, ಕೆಮ್ಮಿದ್ರೆ ಗಾಳ್ಯಾಗೆ ಚಿಮ್ಮಿದ ಕೂಡ್ಲೇ ನೆಲದ ಮ್ಯಾಗೆ, ಬಾಗಿಲು ಹಿಡಿಕಿ, ರೇಲಿಂಗ್ಸ್ ಹಿಂತಾ ಮೇಲ್ಮೈ ಮ್ಯಾಗ ಧಬಕ್ಕನ ಬೀಳ್ತದಂತ. ಗಾಳ್ಯಾಗೇನೂ ಇರಂಗಿಲ್ಲ, ನೀ ವಾಕಿಂಗ್ ಹೋಗಿ ಬಾ’ ಎಂದು ನನಗೆ ಬುದ್ಧಿವಾದ ಹೇಳುತ್ತಲೇ ಇತ್ತು. ಮೊನ್ನೆ ಪೇಪರು ಓದುತ್ತ, ‘ಈ ವೈರಸ್ಸು ಗಾಳ್ಯಾಗೂ ತೇಲ್ಕೋತನೇ ಹೋಗ್ತದಂತಲ್ಲ... ಅದಕ್ಕೇ ಎಲ್ಲಾ ಕಡಿಗಿ ಕೇಸುಗಳು ಇಷ್ಟ್ ಹೆಚ್ಚಾಗ್ತದವು... ವಾಕಿಂಗ್‌ಗೀಕಿಂಗ್ ಎಲ್ಲ ಬಿಟ್ ಬಿಡು ಇನ್ನು’ ಎಂದು ಉಪದೇಶಿಸಿತು.

ಏಪ್ರಿಲ್- ಮೇನಲ್ಲಿ ಭಾನುವಾರ ರಾತ್ರಿ ‘ಒಂದ್ ನಾಕ್ ಮೋಂಬತ್ತಿ ಹಚ್ಚು, ಹಣತೆ ಹಚ್ಚು, ಜೋರಾಗಿ ಜಾಗಟೆ ಬಾರಿಸು, ಚಪ್ಪಾಳೆ ತಟ್ಟು, ಕೊರೊನಾ ನೋಡು ಹೆಂಗ ಓಡಿಹೋಗ್ತದ’ ಎಂದೆಲ್ಲ ಬಿಟ್ಟೂಬಿಡದೆ ಕೊರೆಯುತ್ತಿದ್ದ ಬೆಕ್ಕಣ್ಣ ನಿನ್ನೆ ಜ್ಞಾನೋದಯವಾದಂತೆ ಮೆಲ್ಲಗೆ ಉಸುರಿತು. ‘ಕೊರೊನಾ ಓಡಿಸೋದು ಅಂದ್ರೆ ಕಾಮಿಕ್ ಬುಕ್ಕಿನಾಗೆ ಬಾಲನಮೋ ಮೊಸಳೆ ಹಿಡದಂಗೆ ಅಂತ ಮಾಡೀಯೇನು... ಲಸಿಕೆ ಕಂಡುಹಿಡಿಯೂ ತನಕ ಅದ್ರ ಜೊತಿಗಿ ಜೀವನ ಮಾಡಬೇಕು ಅಂದರ ರೋಗನಿರೋಧಕ ಶಕ್ತಿ ಬೆಳೆಸಿಕೋಬೇಕಷ್ಟೆ...’ ಎಂದು ನನಗೇ ಉಲ್ಟಾ ಹೊಡೆಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.