ADVERTISEMENT

ಚುರುಮುರಿ: ಮತಲಕ್ಷ್ಮಿ

ಮಣ್ಣೆ ರಾಜು
Published 7 ಮಾರ್ಚ್ 2023, 19:31 IST
Last Updated 7 ಮಾರ್ಚ್ 2023, 19:31 IST
   

‘ನಮ್ಮ ಬಡಾವಣೆಯ ಮಹಿಳಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಎಮ್ಮೆಲ್ಯೆ ಬರ್ತಿದ್ದಾರೆ. ಕಾರ್ಯಕ್ರಮದ ಪೂರಾ ಖರ್ಚನ್ನು ಶಾಸಕರ ಹೆಂಡತಿ ವಹಿಸಿಕೊಂಡಿದ್ದಾರೆ ಕಣ್ರೀ...’ ಸುಮಿ ಸಂಭ್ರಮದಿಂದ ಹೇಳಿದಳು.

‘ಮತ ನೀಡಿ ಮತ್ತೊಮ್ಮೆ ಗೆಲ್ಲಿಸಿ ಎಂದು ಶಾಸಕರು ಚುನಾವಣಾ ಭಾಷಣ ಮಾಡಲು ಮಹಿಳಾ ದಿನಾಚರಣೆ ವೇದಿಕೆಯಾಗುತ್ತದೆ’ ಅಂದ ಶಂಕ್ರಿ.

‘ಆಗಲಿಬಿಡಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಮಹಿಳೆಯರಿಗೆ ಯುಗಾದಿ ಹಬ್ಬಕ್ಕೆ ಸೀರೆ ಉಡುಗೊರೆ ಕೊಡ್ತೀನಿ, ದಯವಿಟ್ಟು ಬೇಡ ಅನ್ನಬೇಡಿ ಎಂದು ಶಾಸಕರ ಪತ್ನಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಕಲರ್, ಡಿಸೈನ್ ಇಷ್ಟವಾಗದಿದ್ದರೆ ಸೀರೆಯನ್ನು ಎಕ್ಸ್‌ಚೇಂಜ್ ಮಾಡಬಹುದಂತೆ’.

ADVERTISEMENT

‘ಯುಗಾದಿ ಹಬ್ಬಕ್ಕೆ ನೀನೊಬ್ಬಳು ಹೊಸ ಸೀರೆ ಉಟ್ಟುಕೊಂಡರೆ ಸಾಕಾ?’

‘ಹಾಗಂತ ಮನೆಮಕ್ಕಳಿಗೆಲ್ಲಾ ಹೊಸ ಬಟ್ಟೆ, ಬೇಳೆ, ಬೆಲ್ಲವನ್ನೂ ಕೊಡಿಸಿ ಅಂತ ಶಾಸಕರಿಗೆ ಕೇಳಲಾಗುತ್ತೇನ್ರೀ?’ ಸುಮಿಗೆ ಸಿಟ್ಟು.

‘ಎಲೆಕ್ಷನ್ ಸಮಯದಲ್ಲಿ ರಾಜಕಾರಣಿಗಳು ಮಹಿಳೆಯರಿಗೆ ಸೀರೆ, ಕುಕ್ಕರ್, ಮಿಕ್ಸಿ, ಬೆಳ್ಳಿ ಬಟ್ಟಲು ಕೊಡುತ್ತಾರೆ. ಇವರಿಗೆ ಮಹಿಳೆಯರ ಬಗ್ಗೆ ಇರುವಷ್ಟು ನಂಬಿಕೆ, ವಿಶ್ವಾಸ ಪುರುಷರ ಬಗ್ಗೆ ಇಲ್ಲ’ ಶಂಕ್ರಿ ವಿಷಾದಿಸಿದ.

‘ಬಾಡೂಟ, ಬಿರಿಯಾನಿ ಕೂಟ ಅಂತ ರಾಜಕೀಯ ಪಕ್ಷಗಳ ಉಣ್ಣು ಮೇಜಿನ ಸಭೆಗಳಿಗೆ ನೀವೂ ಹೋಗಿ ಉಂಡು ಬರ್ತೀರಲ್ಲ’.

‘ಮಹಿಳೆಯರಿಗೆ ಗೃಹಲಕ್ಷ್ಮಿ, ಭಾಗ್ಯಲಕ್ಷ್ಮಿ, ಮನೆಲಕ್ಷ್ಮಿ, ಮತಲಕ್ಷ್ಮಿಯಂತಹ ದುಡ್ಡು ಕೊಡುವ ಯೋಜನೆಗಳನ್ನು ಪಕ್ಷಗಳು ಘೋಷಣೆ ಮಾಡಿವೆ. ಬೈಕಿಗೆ ಪೆಟ್ರೋಲ್ ತುಂಬಿಸುವಂತಹ ಸಣ್ಣ ಯೋಜನೆಯೂ ಪುರುಷರಿಗಿಲ್ಲ. ಪದಾರ್ಥಗಳ ದರ ದುಬಾರಿಯಾಗಿದೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ ಅಂತ ಮಹಿಳೆಯರು ಧ್ವನಿ ಎತ್ತಬೇಕು’.

‘ಮತಲಕ್ಷ್ಮಿ ಯೋಜನೆಯಲ್ಲಿ ಕೊಡುವ ದುಡ್ಡು ಸಿಲಿಂಡರಿಗೂ ಆಗಿ ತರಕಾರಿ ಕೊಳ್ಳುವಷ್ಟು ಉಳಿಯುವುದಂತೆ...’ ಎಂದ ಸುಮಿ, ‘ಮಹಿಳೆಯರು ಮತ ಕೊಡಿ, ಟಿಕೆಟ್ ಕೇಳಬೇಡಿ ಎಂಬುದು ಮತಲಕ್ಷ್ಮಿ ಯೋಜನೆಯ ಉದ್ದೇಶವಿರಬಹುದು ಕಣ್ರೀ...’ ಎಂದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.