ADVERTISEMENT

ಚುರುಮುರಿ: ಕುರಿಗಳು ಸಾರ್‌...

ಸುಮಂಗಲಾ
Published 28 ಡಿಸೆಂಬರ್ 2025, 23:40 IST
Last Updated 28 ಡಿಸೆಂಬರ್ 2025, 23:40 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಹೊಸ ವರ್ಷಕ್ಕೆ ಏನು ಸಾಧನೆ ಮಾಡಬೇಕಂತ ಗುರಿ ಹಾಕಿಕೊಂಡೀ?’ ಬೆಕ್ಕಣ್ಣ ಕೆದಕಿತು.

‘ಸಾಲಗೀಲ ಮಾಡದೆ ನೆಮ್ಮದಿಯಿಂದ ಒಂದು ವರ್ಷ ಕಳೆಯೋ ಕನಸಷ್ಟೆ ನನ್ನದು. ಎಲ್ಲಿಯ ಗುರಿ? ಗುರಿಗಳು ಏನಿದ್ದರೂ ಕುರ್ಚಿ ಕನಸಿನ ನಮ್ಮ ರಾಜಕಾರಣಿಗಳಿಗೆ’ ಎಂದೆ.

ADVERTISEMENT

‘ಅದೂ ನಿಜಾನೆ. ಡಿಕೇಶಂಕಲ್ಲು ಮತ್ತು ಸಿದ್ದು ಅಂಕಲ್ಲು ಇಬ್ಬರದ್ದೂ ಒಂದೇ ಗುರಿ... ಸಿಎಂ ಕುರ್ಚಿ. 2026ರಲ್ಲಿ ಸಿದ್ದು ಅಂಕಲ್ಲು ಗುರಿ ಉಳಿಸಿಕೊಳ್ಳತಾರೋ ಅಥವಾ ಡಿಕೇಶಂಕಲ್ಲು ಗುರಿ ಗೆಲ್ಲುತಾರೋ ಅಂತ ಕಾದು ನೋಡೂಣು’ ಎಂದು ಬೆಕ್ಕಣ್ಣ ನಕ್ಕಿತು.

‘ಇಬ್ಬರ ಜಗಳ ಮೂರನೆಯವರಿಗೆ ಲಾಭ ಅನ್ನೂ ಹಂಗೆ ಕಮಲ–ದಳಗಳ ಕನಸು, ಗುರಿ ಎರಡೂ ಅಂದರೆ 2026ರ ಕ್ರಾಂತಿ ಇರಬೌದು.’

‘ಯಾವ ತಿಂಗಳಲ್ಲಿ ಕ್ರಾಂತಿ ಅನ್ನೂದು ಗುಟ್ಟಾದ ಗುರಿ! ಕಮಲ–ದಳಗಳ ಈ ಕನಸಿಗೆ ರಹಸ್ಯವಾಗಿ ಕೈಜೋಡಿಸೋರು ಅದಾರೆ’ ಎಂದು ಬೆಕ್ಕಣ್ಣ ಕಣ್ಣು ಮಿಟುಕಿಸಿತು.

‘ಮತ್ತೆ ಮೋದಿಮಾಮಾರ ಗುರಿ ಏನಂತೆ?’ ನಾನು ಕುತೂಹಲದಿಂದ ಕೇಳಿದೆ.

‘2026ರಲ್ಲಿ ದೇಶದ ಎಲ್ಲ ನಗರಗಳಲ್ಲಿರೋ ಮಹಾತ್ಮ ಗಾಂಧಿ ಹೆಸರಲ್ಲಿರೋ ರಸ್ತೆಗಳು, ವೃತ್ತಗಳ ಹೆಸರನ್ನು ಮೊದಲು ಬ್ಯಾರೆ ಮಾಡದು... ವಿಕಸಿತ ಮಾರ್ಗ್‌, ಏಳಿಗೆ ಪಥ, ಅಭ್ಯುದಯ ವೃತ್ತ, ಹಿಂಗೆ ಸೂಕ್ತವಾದ ಹೆಸರು ಇಡದು ಒಂದು ಗುರಿ. ವಿಶ್ವಗುರುವಿನ ಬತ್ತಳಿಕೆಯಲ್ಲಿ ಇನ್ನಾ ಭಾಳ ಗುರಿಗಳು ಅದಾವು’ ಬೆಕ್ಕಣ್ಣ ಮೀಸೆ ತಿರುವಿತು.

‘ಸದ್ಯ... ಭಾರತದ ಸುಪ್ರಜೆಗಳ ಹೆಸರನ್ನು ಬದಲಿಸೋ ಗುರಿ ಇಟ್ಟುಕೊಳ್ಳದಿದ್ದರೆ ಸಾಕು’ ಎಂದು ನಾನು ನಕ್ಕೆ.

‘ನೀವು ಶ್ರೀಸಾಮಾನ್ಯರು ಅಂದ್ರ ಕುರಿಗಳೇ! ನಿಮಗೆ ಹೊಸದಾಗಿ ಕುರಿಗಳು ಅಂತ ನಾಮಕರಣ ಮಾಡೂ ಅಗತ್ಯನೇ ಇಲ್ಲ! ನಿಸಾರ್‌ ಅಹಮದ್‌ ಕವಿಗಳು ಭಾಳ ಹಿಂದೇನೆ ಕುರಿಗಳು ಸಾರ್‌ ಕುರಿಗಳು ಅಂತ ಕವನ ಬರೆದಿದ್ದು ನಿಮ್ಮಂತವರ ಕುರಿತೇ!’ ಎಂದು ಬೆಕ್ಕಣ್ಣ ನನ್ನ ಮೂತಿಗೆ ತಿರುವಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.