ADVERTISEMENT

ಚುರುಮುರಿ: ಬಿಡದ ಸಂಕಲ್ಪಗಳು!

ತುರುವೇಕೆರೆ ಪ್ರಸಾದ್
Published 26 ಡಿಸೆಂಬರ್ 2025, 23:30 IST
Last Updated 26 ಡಿಸೆಂಬರ್ 2025, 23:30 IST
_
_   

‘ಮೋದಿಮಾಮ ಹೊಸ ವರ್ಷಕ್ಕೆ ಮುಂಚೇನೆ ಗಾಂಧಿ ಬಿಟ್ಟವ್ರೆ, ನೀವೇನ್‌ ಬಿಟ್ಟೀರಿ?’ ಕೆದಕಿದ ಗುದ್ಲಿಂಗ.

‘ಬಿಡಕ್ಕೆ ಏನು ಬಾಕಿ ಅದೆ? ಹೆಂಡತಿ ಚಟ ಎಲ್ಲಾ ಬಿಡ್ಸವ್ಳೆ. ಬಾಸು ಹಟ ಬಿಡ್ಸವ್ನೆ. ಬೈಯೋದನ್ನ ಸರ್ಕಾರನೇ ಬಿಡ್ಸೈತೆ’ ಎಂದ ಮಾಲಿಂಗ.

‘ನಮ್ಮ ರಾಜಕೀಯದೋರು ಪ್ರತಿ ಪಿತೃಪಕ್ಷಕ್ಕೆ ಮಾತೃಪಕ್ಷಕ್ಕೇ ಎಳ್ಳು–ನೀರು ಬಿಡ್ತಾರೆ. ನಾವು ಏನ್ ಬಿಡಕ್ಕಾಗುತ್ತೆ?’

ADVERTISEMENT

‘ನಾನು ಎಣ್ಣೆ ಬಿಡ್ಬೇಕು ಅಂದ್ಕೊಂಡೆ. ಆದ್ರೆ ಎಣ್ಣೆ
ಮೇಲೆ ಸಮಸ್ತ ಗ್ಯಾರಂಟಿ ನಿಂತಿದೆ. ಹಂಗಾಗಿ ನಾನು
ಎಣ್ಣೆ ಬಿಟ್ರೆ ಜನಕ್ಕೆ ದ್ರೋಹ ಮಾಡಿದಂಗಾಗುತ್ತೆ ಅಂತ ಸುಮ್ಕಾದೆ’.

‘ನಾನೂ ಅಷ್ಟೇ! ಗುಟ್ಕಾ ಬಿಟ್ರೆ ನಮ್ಮ ರೈತರಿಗೆ ಶಾನೆ ಅನ್ಯಾಯ ಮಾಡಿದಂಗಾಗುತ್ತೆ ಅಂತ ನನ್ ಸಂಕಲ್ಪಾನ
ಒಳಗೇ ನುಂಗ್ಕೊಂಡಿದೀನಿ’ ಎಂದು ಕಾಳಜಿಯ ಧ್ವನಿಯಲ್ಲಿ ಹೇಳುತ್ತಾ ಪಿಚಕ್ಕನೆ ಉಗಿದ ಭದ್ರ.

‘ಹೌದೌದು, ಭಾರೀ ರಗಳೆ ಮಾರಾಯ. ಸಾಲ ಮಾಡೋದು ಬಿಟ್ರೆ ದೇಶದ ಆರ್ಥಿಕತೇನೆ ಹಾಳಾಗುತ್ತೆ. ಅದ್ಕೇ ಎಲ್ಲಾ ಸೊಸೈಟೀಲು ಸುಸ್ತಿ ಆಗಿವ್ನಿ’.

‘ಲೇಯ್, ಈಗ ಬಿಡೋ ಕಾಲ ಅಲ್ರಲೇ, ಬಿಡ್ದೇ ಇರೋ ಟ್ರೆಂಡ್! ಸಿಎಂ ತಲೆ ಮೇಲೆ ತಲೆ ಬಿದ್ರೂ ಕುರ್ಚಿ ಬಿಡಲ್ಲ ಅಂತ ಸಂಕಲ್ಪ ಮಾಡವ್ರೆ. ಡಿಸಿಎಂ ಎಷ್ಟೇ ಊಟದ ಆಟ ಆಡುದ್ರೂ ಇಟ್ಟ ಗೂಟ ತೆಗೆಯಲ್ಲ ಅಂತ ಶಪಥ ಮಾಡವ್ರೆ’ ಎಂದ ಕಲ್ಲೇಶಿ.

‘ಊ ಕಣ್ಲಾ, ಕೈಕಮಾಂಡೂ ಅಷ್ಟೇ! ಯಾರು ಎಷ್ಟಾರಾ ಬಾಯ್ ಬಡ್ಕಳಿ, ನಾವು ಮಧ್ಯೆ ತಲೆ ಆಕಕಿಲ್ಲ ಅಂತ ಸಂಕಲ್ಪ ಮಾಡವ್ರೆ’.

‘ಕೆಲವ್ರುದ್ದು ಮಾತ್ರ ಬಿಡಂಗಿಲ್ಲ, ಕಟ್ಕಳೋಂಗಿಲ್ಲ ಅನ್ನೋ ಧರ್ಮಸಂಕಟ! ಬಗೆಹರೀಲಿಲ್ಲ ಕುರ್ಚಿ ಕಗ್ಗಂಟು, ಆಗಲಿಲ್ಲ ಸುಸೂತ್ರ ಹೆರ‍್ಗೆ, ಆಟಕ್ಕಿಲ್ಲ ತಾವು ಲೆಕ್ಕಕ್ಕುಂಟು ಅಂತ ಕೈ ಚೆಲ್ಲವ್ರೆ ಖರ್ಗೆ’ ಎಂದ ಪರ‍್ಮೇಶಿ’.

ಎಲ್ಲಾ ಗೊಳ್ಳನೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.