
‘ಅಣೈ, ರಾಜಕಾರಣಿಗಳು ಬೀದಿಬೀದಿಲಿ ನಿಂತುಗಂದು ಸಮಯ ಸಾಧಿಸಿ ಕವಕವ ಅಂತ ಕಿತ್ತಾಡತರಲ್ಲ, ಇದುನ್ನ ಸಮಯಸಾಧಕ ರಾಜಕೀಯ ಅನ್ನಬೈದಾ’ ಅಂತ ತುರೇಮಣೆಗೆ ಕೇಳಿದೆ.
‘ಲೋ ಹಂಗೆಲ್ಲಾ ಕಂಡಾಬಟ್ಟೆ ಬೈಯಂಗುಲ್ಲ ಕಲಾ. ಮೊನ್ನೆ ದ್ವೇಷ ಭಾಷಣ ಮಸೂದೆ ಜಾರಿಯಾಗ್ಯದೆ. ಆಮೇಲೆ ನಿನ್ನ ತಕ್ಕೋಗಿ ಪರಪ್ಪನ ಅಗ್ರಾರಕಾಕ್ತರೆ’ ಅಂತ ತುರೇಮಣೆ ಎಚ್ಚರಿಸಿದರು.
‘ಮಂತೆ ಗಾಂಧೀಜಿಯೋರು ಸತ್ಯಮೇವ ಜಯತೆ ಅಂದುದ್ದು ಸುಮ್ಮನೇನಾ?’ ಅಂತ ಬೇಜಾರಲ್ಲಿ ಕೇಳಿದೆ.
‘ಲೇ ದಡ್ಡಾ, ಗಾಂಧಿ ಔಟ್‌ಡೇಟಾಗ್ಯವರೆ ಅಂತ ಜೈರಾಂಜೀ ಹೆಸರಲ್ಲಿ ಹೊಸಾ ಬ್ಲಡ್ಡು ತಂದವ್ರೆ. ಅದುಕ್ಕೇ ಈಗ ರಾಜಕೀಯಕ್ಕೆ ಯುವಕರ ಬ್ಲಡ್ಡು ಬರಬೇಕು ಅಂತ ಅಣ್ಣಾರು ಯೇಳ್ಯವರೆ’ ಯಂಟಪ್ಪಣ್ಣ ಒಗ್ಗರಣೆ ಹಾಕಿತು.
‘ಅದುಕ್ಕೇ ಇರಬಕು. ಹೈಕಮಾಂಡುಗಳೆಲ್ಲಾ ‘ನಮಗೆ ವಯಸ್ಸಾಗ್ಯದೆ ಕಪ್ಪಾ. ಸುಗರ‍್ರು, ಮಂಡಿನೋವು, ಅಲ್ಜೀಮರ್ಸ್, ಕಣ್ಣು–ಕಿವಿ ಮಂದಾಗ್ಯವೆ. ನಿಮ್ಮ ನಿಮ್ಮ ಜಗಳ ನೀವು ನೀವೇ ಬಗಹರಿಸಿಕ್ಯಂದು ಎಲ್ಲಿಗನ್ನಾ ತ್ಯಾಪೆ ಹಾಕ್ಕಳಿ ಅಂದವ್ರೆ’ ತಿಪ್ಪಣ್ಣ ಸಾಸುವೆ ಸಿಡಿಸಿದ.
‘ಸತ್ಯ ಕನ ತಿಪ್ಪಣ್ಣ. ಮೊನ್ನೆ ಅಸೆಂಬ್ಲಿ, ಲೋಕಸಭೆ ಅಧಿವೇಶನದಲ್ಲಿ ಒಬ್ಬ ನಾಯಕರನ್ನಾ ಜನದ ಕಷ್ಟಗಳ ಬಗ್ಗೆ ಬಾಯಿ ತಗೀಲೇ ಇಲ್ಲ. ಕಬ್ಬು ಬೆಳೆದೋನು ಬಡವನಾದ. ಫ್ಯಾಕ್ಟ್ರಿ ಓನರು ದುಂಡಗಾದ ಹ್ಯಂಗೆ ಅಂತ ಯಾರೂ ಕೇಳ ನಿಲ್ಲ. ಎಲ್ಲಾರೂ ರಕ್ಷಣಾತ್ಮಕ ಆಟ ಆಡಿಕ್ಯಂದು ಅವರವರ ವಿಕೆಟ್ ಉಳಿಸಿಕ್ಯಳಕ್ಕೆ ನೋಡಿದ್ರಷ್ಟೇ’ ಅಂತ ಹೇಳಿದೆ.
‘ಈಗ ಕರ್ನಾಟಕದ ರಾಜಕೀಯದಲ್ಲಿರೋ ಮುದುಕರಿಗೆಲ್ಲಾ ಚಳಿ ಹಿಡಿದು ಕೆಮ್ಮು ಜಾಸ್ತಿಯಾಗಿ ರಾಜಕೀಯ ನಿಶ್ಶಕ್ತಿ ಬಂದೋಗ್ಯದೆ ಕನೋ’ ತುರೇಮಣೆಗೂ ಸಿಟ್ಟು ಬಂದಿತ್ತು.
‘ಯಾರ‍್ರೀ ಅದು ನಿಶ್ಶಕ್ತಿ ಅಂದುದ್ದು. ಅದು ದ್ವೇಷ ಭಾಷೆ ಆತದೆ. ವಡೀರಿ ಕಪಾಳಕ’ ತಿಪ್ಪಣ್ಣನ ಜೋಕು ಕೇಳಿ ನಮಗೆ ನಕ್ಕು ನಕ್ಕು ನಿಶ್ಶಕ್ತಿ ಆತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.