ADVERTISEMENT

‘ಪಾಸಿಟಿವ್‌’ ಎನರ್ಜಿ!

ಬಿ.ಎಂ.ಹನೀಫ್
Published 23 ಅಕ್ಟೋಬರ್ 2019, 18:30 IST
Last Updated 23 ಅಕ್ಟೋಬರ್ 2019, 18:30 IST
   

ಆರೋಗ್ಯ ಸಚಿವರ ಯಮರ್ಜನ್ಸಿ ಮೀಟಿಂಗಿಗೆ ಎದ್ದೋ ಬಿದ್ದೋ ಓಡಿ ಬಂದ ಜಿಲ್ಲಾಸ್ಪತ್ರೆಯ ಅಧೀಕ್ಷಕ ಜಿಂಗಾಲಪ್ಪ ಏದುಸಿರು ಬಿಡುತ್ತಿದ್ದರು. ಅದಾಗಲೇ ಮೀಟಿಂಗ್‌ ಶುರುವಾಗಿದ್ದು, ಪ್ಲಾಸ್ಟಿಕ್‌ ತಟ್ಟೆಯ ಮೇಲಿದ್ದ ಹುರಿದ ಗೋಡಂಬಿಗಳೆಲ್ಲ ಖಾಲಿಯಾಗಿ ಒಂದೆರಡು ಚಿಪ್ಸ್‌ ಅಷ್ಟೇ ಉಳಿದುಕೊಂಡಿದ್ದವು. ಸಚಿವರು ಸಿಕ್ಕಾಪಟ್ಟೆ ಗರಂ ಆಗಿದ್ದರು.‘ಬನ್ರೀ... ನಿಮ್ಮನ್ನೇ ಕಾಯ್ತಿದ್ದೀವಿ’ ಎಂದು ಕೈಲಿದ್ದ ಫೈಲನ್ನು ಟೇಬಲ್‌ ಮೇಲೆ ಒಗೆದರು.

‘ಜೈಶ್ರೀರಾಂ ಸಾರ್‌’ ಎಂದು ಕುರ್ಚಿಯಲ್ಲಿ ಕುಸಿದರು ಜಿಂಗಾಲಪ್ಪ.

‘ಇದು ಪಕ್ಷದ ಸಭೆಯಲ್ಲ, ಸರ್ಕಾರದ ಸಭೆ. ನಮಸ್ಕಾರ ಮಾಡಿ ಸಾಕು. ಅದಿರಲಿ, ಕಳೆದ ಒಂದು ತಿಂಗಳಲ್ಲಿ ನಿಮ್ಮ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 18 ಸಾವುಗಳು ಸಂಭವಿಸಿವೆ. ಟೀವಿಯವರು ಹೊಯ್ಕೊಳ್ತಿದಾರೆ. ನೀವೇನ್ಮಾಡ್ತಿದೀರಿ?’

ADVERTISEMENT

‘ಸರ್‌, ಎಲ್ಲ ಪ್ರಯತ್ನಗಳನ್ನೂ ಮಾಡ್ತಿದೀವಿ. ರೋಗಿಗಳಲ್ಲಿ ಪಾಸಿಟಿವ್‌ ಎನರ್ಜಿನೇ ಇಲ್ಲ ಸಾರ್‌...’

‘ಅದೇ... ಅದನ್ನು ಹೆಚ್ಚು ಮಾಡೋದಕ್ಕೆ ಏನ್‌ ಮಾಡಿದ್ದೀರಿ...?’

‘ಸರ್‌, ಆಸ್ಪತ್ರೆಯ ಆವರಣದಲ್ಲಿ ಶ್ರೀರಾಮನ ಗುಡಿ, ಮೌಲಾಸಾಬ್ ದರ್ಗಾ ಮತ್ತು ಸಂತ ಮೇರಿ ಇಗರ್ಜಿ ಕಟ್ಟಿದ್ದೀವಿ. ರೋಗಿಗಳನ್ನು ಪ್ರತಿದಿನವೂ ಬೆಳಿಗ್ಗೆ ಅದಕ್ಕೆ ಒಂದು ಸುತ್ತು ಹಾಕಿಸ್ತೀವಿ. ಪ್ರತಿದಿನ ಮೃತ್ಯುಂಜಯ ಜಪ, ಫಾತೆಹಾ ಮತ್ತು ಸಂಡೇ ಪ್ರೇಯರ್‌ಗಳನ್ನು ಮಾಡಿಸ್ತೀವಿ...’

‘ಆದ್ರೂ ಏಕೆ ರೋಗಿಗಳು ಸಾಯುತ್ತಿದ್ದಾರೆ? ನಿಮ್ಮ ಆಸ್ಪತ್ರೆಗೆ ಹಣಕಾಸಿನ ತೊಂದರೆ ಏನಾದರೂ ಇದೆಯಾ?’

‘ಇಲ್ಲ ಸಾರ್‌...’

‘ಮತ್ಯಾಕೆ ಕಳೆದ ತಿಂಗಳು ಸರ್ಕಾರದಿಂದ ಬಂದ ಗ್ರ್ಯಾಂಟ್‌ ಹಾಗೇ ಉಳ್ಕೊಂಡಿದೆ?’

‘ಸರ್ಕಾರದ ದುಡ್ಡು ಮುಟ್ಟುವ ಅವಶ್ಯಕತೆಯೇ ಬಂದಿಲ್ಲ ಸಾರ್‌. ದೇವಸ್ಥಾನ, ದರ್ಗಾ ಮತ್ತು ಇಗರ್ಜಿಯ ಹುಂಡಿಯಲ್ಲಿ ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿ ಕಲೆಕ್ಟ್‌ ಆಗ್ತಾ ಇದೆ. ಅದನ್ನೇ ಆಸ್ಪತ್ರೆಯ ಖರ್ಚುಗಳಿಗೆ ಬಳಸ್ತಿದೀವಿ ಸಾರ್‌...’

‘ತಿಂಗಳಲ್ಲಿ 18 ಸಾವು ಅಂದ್ರೆ ಜಾಸ್ತಿ ಆಗ್ಲಿಲ್ವೇನ್ರೀ..? ಪೂಜಾರಿ, ಮೌಲ್ವಿ, ಪಾದ್ರಿಗಳಿಗೆ ನೋಟಿಸ್‌ ಕೊಡಿ. ಅವ್ರು ಸರಿಯಾಗಿ ಪೂಜೆ ಮಾಡ್ತಿಲ್ಲಾಂತ ಕಾಣ್ಸುತ್ತೆ. ಹೌದು, ರೋಗಿಗಳು ಸತ್ತಿದ್ದು ಹೇಗೆ? ಏನ್‌ ಕಾಯಿಲೆ?’

‘ಸಾರ್‌... ಅದೂ... ಅದೂ... ಎಲ್ಲವೂ ಎಚ್‌ಐವಿ ಪಾಸಿಟಿವ್‌ ಸಾರ್‌...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.