ADVERTISEMENT

ಚುರುಮುರಿ | ಗುಂಡಿ ಯಾನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 22:05 IST
Last Updated 7 ಡಿಸೆಂಬರ್ 2025, 22:05 IST
   

ಬಿಎಂಟಿಸಿ ಬಸ್ ಹತ್ತಿದ ಶಂಕ್ರಿ, ಸುಮಿ, ‘ಬೆಂಗಳೂರಿನ ಗುಂಡಿ ರಸ್ತೆಗಳಲ್ಲಿ ಪ್ರಯಾಣ ಕ್ಷೇಮಕರವಾಗಿರುವುದಿಲ್ಲ. ನಮ್ಮ ಜೀವ ನಿಮ್ಮ ಕೈಯಲ್ಲಿರುತ್ತದೆ, ನೀವೇ ಕಾಪಾಡಬೇಕು...’ ಎಂದು ಡ್ರೈವರ್‌ಗೆ ಕೈ ಮುಗಿದರು.

ಡ್ರೈವರ್ ನಕ್ಕ.

‘ಬಸ್ ಕುಲುಕುವುದೇ ಸಾರ್?’ ಸುಮಿ ಕೇಳಿದಳು.

ADVERTISEMENT

‘ಗುಂಡಿಗಳ ರಸ್ತೆಯಲ್ಲಿ ಹೋಗುವ ಬಸ್ ಕುಲುಕದೆ ಬಳುಕುವುದೇ ಮೇಡಂ?’

‘ಗುಂಡಿ ರಸ್ತೆಯ ಪ್ರಯಾಣ ಗಂಡಾಂತಕಾರಿ. ನಿತ್ಯ ಪ್ರಯಾಣಿಸುವ ನಿಮಗೆ ಭಯ ಆಗೋದಿಲ್ವಾ?’

‘ಹಹ್ಹಹ್ಹಾ... ಇಲ್ಲಾ ಮೇಡಂ, ಗುಂಡಿ ಮಾರ್ಗದಲ್ಲಿ ಪಳಗಿಬಿಟ್ಟಿದ್ದೇನೆ. ಈ ರೂಟ್‌ನಲ್ಲಿ ಎಷ್ಟು ಗುಂಡಿಗಳಿವೆ, ಅವು ಎಲ್ಲೆಲ್ಲಿವೆ, ಗುಂಡಿಗಳ ಆಳ, ಅಗಲ ಎಷ್ಟು ಎನ್ನುವ ಗುಂಡಿ ಗಣಿತ ಗೊತ್ತಿದೆ’ ಎನ್ನುತ್ತಲೇ ಎದುರಾದ ಗುಂಡಿ ಇಳಿಸಲು ಡ್ರೈವರ್ ಸಡನ್ ಬ್ರೇಕ್ ಹಿಡಿದರು. ಹಿಂದಿನ ಸೀಟಿನಲ್ಲಿ ಯಾರೋ ‘ಅಯ್ಯಯ್ಯೋ!...’ ಎಂದು ಕಿರುಚಿದರು.

‘ಯಾರು, ಏನಾಯ್ತು?’ ಶಂಕ್ರಿ ಕೇಳಿದ.

‘ಬ್ರೇಕ್ ಹಾಕಿದೆನಲ್ಲಾ, ಯಾರೋ ಮುಗ್ಗರಿಸಿ ಮುಂದಿನ ಸೀಟಿಗೆ ತಲೆ ಗುದ್ದಿಕೊಂಡಿರಬೇಕು. ಇದೆಲ್ಲಾ ಕಾಮನ್!’ ಅಂದ್ರು ಡ್ರೈವರ್.

ಪಕ್ಕದಲ್ಲಿದ್ದ ಇಬ್ಬರು ಹೆಂಗಸರು ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡಿದ್ದರು. ‘ನೀವೂ ಮುಂದಿನ ಸೀಟಿಗೆ ತಲೆ ಗುದ್ದಿಕೊಂಡಿರಾ?’ ಸುಮಿ ಕೇಳಿದಳು.

‘ಇಲ್ಲಾ ಮೇಡಂ, ನಾವು ಸ್ಟಾಂಡಿಂಗ್ ಇದ್ವಿ, ಬ್ರೇಕ್ ಹೊಡೆದ ರಭಸಕ್ಕೆ ಒಬ್ಬರಿಗೊಬ್ಬರು ತಲೆ ಗುದ್ದಿಕೊಂಡ್ವಿ, ಕಂಡಕ್ಟರ್ ಬಂದು ಪ್ರಥಮ ಚಿಕಿತ್ಸೆ ಮಾಡಿದ್ರು, ದ್ವಿತೀಯ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಬೇಕು’ ಅಂದರು.

‘ರಸ್ತೆಯಲ್ಲಿ ಅಪಘಾತವಾಗೋದನ್ನು ನೋಡಿದ್ದೀನಿ, ಬಸ್ ಒಳಗೂ ಅಪಘಾತನಾ?  ಇವರ ತಲೆ ರಿಪೇರಿ ಖರ್ಚನ್ನು ಸರ್ಕಾರವೇ ಭರಿಸಬೇಕು’ ಒತ್ತಾಯಿಸಿದಳು ಸುಮಿ.

‘ನಾವೇ ತಲೆ ರಿಪೇರಿ ಮಾಡಿಕೊಳ್ತೀವಿ, ಸರ್ಕಾರ ರಸ್ತೆ ಗುಂಡಿಗಳನ್ನು ರಿಪೇರಿ ಮಾಡಲಿ...’ ಎಂದು ಹೆಂಗಸರು ಬಸ್ ಇಳಿದುಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.