ಚುರುಮುರಿ: ಸೂಸೈಡ್ ಬಾಂಬ್!
‘ನಾನೂ ಯುದ್ಧಕ್ಕೆ ಹೋಗ್ಬೇಕು ಅಂತ ಡಿಸೈಡ್ ಮಾಡಿದ್ದೀನಿ ಕಣ್ರಲೆ, ಸೊಂಟಕ್ಕೆ ಸೂಸೈಡ್ ಬಾಂಬ್ ಕಟ್ಕಂಡು ಹೋಗ್ತೀನಿ’ ಹರಟೆಕಟ್ಟೆಯಲ್ಲಿ ತೆಪರೇಸಿ ಹೇಳಿದಾಗ ಗುಡ್ಡೆ ಕಿಸಕ್ಕೆಂದ.
‘ಯಾಕಲೆ ನಗ್ತೀಯ? ನಾನು ಸೀರಿಯಸ್ಸಾಗಿ ಹೇಳ್ತಿದ್ದೀನಿ’ ತೆಪರೇಸಿಗೆ ಸಿಟ್ಟು ಬಂತು.
‘ಅಲ್ಲ, ಸೊಂಟಕ್ಕೆ ಬಾಂಬ್ ಕಟ್ಕತೀನಿ ಅಂದ್ಯಲ್ಲ, ನಿಂಗೆ ಸೊಂಟ ಎಲ್ಲೈತೋ? ದಪ್ಪ ಹೊಟ್ಟೆ ಒಂದೇ ಇರೋದು’ ಗುಡ್ಡೆಗೆ ಇನ್ನೂ
ನಗು.
‘ಲೇಯ್, ದೇಶದ ವಿಷ್ಯದಲ್ಲಿ ತಮಾಷೆ ಬೇಡ. ತೆಪರ ಒಬ್ನೇ ಅಲ್ಲ, ಮನಿಗೊಬ್ಬರಂಗೆ ಯುದ್ಧಕ್ಕೆ ಹೋಗ್ಬೇಕು. ನಮಗೆ ದೇಶ ಮುಖ್ಯ’ ಎಂದಳು ಮಂಜಮ್ಮ.
‘ನಮ್ಗೂ ದೇಶಾನೇ ಮುಖ್ಯ ಮಂಜಮ್ಮ, ಅದಲ್ಲ... ಈ ತೆಪರ ಯಾವತ್ತಾದ್ರೂ ಬಾಂಬ್ ನೋಡಿದಾನಾ ಕೇಳು. ಇವನಿಗೆ ಆತ್ಮನೇ ಇಲ್ಲ, ಹುತಾತ್ಮ ಆಗಾಕೆ ಹೊಂಟಾನೆ’ ದುಬ್ಬೀರನೂ
ನಕ್ಕ.
‘ಲೇ ತೆಪರ, ಈಗ ನೀನು ಸೊಂಟಕ್ಕೆ ಬಾಂಬ್ ಕಟ್ಕಂಡು ಯುದ್ಧಕ್ಕೆ ಹೋಗ್ತೀಯ, ಪಾಕಿಸ್ತಾನದ ಒಳಕ್ಕೆ ಹೋಗಿ ಬಾಂಬ್‌ನ ಬಟನ್ ಒತ್ತುತೀಯ, ಅಕಸ್ಮಾತ್ ಅದು ‘ಢಂ’ ಅನ್ನದಿದ್ರೆ ಏನ್ ಮಾಡ್ತೀಯ?’ ಕೊಟ್ರೇಶಿ ಕೊಕ್ಕೆ.
‘ಹಾ... ಕರೆಕ್ಟ್, ಆಗ ಉಗ್ರರು ನಿನ್ ಮೇಲೆ ಶಸ್ತ್ರಾಸ್ತ್ರ ದಾಳಿ ಮಾಡ್ತಾರೆ, ಆಗೇನ್ ಮಾಡ್ತೀಯ?’ ದುಬ್ಬೀರನೂ ದನಿಗೂಡಿಸಿದ.
‘ಆಗ ಅಲ್ಲಿಂದ ತಪ್ಪಿಸ್ಕಂಡ್ ಬರ್ತಾನೆ, ಅದ್ಯಾವ ದೊಡ್ಡ ವಿಷ್ಯ?’ ಗುಡ್ಡೆ ಹೇಳಿದ.
‘ತಪ್ಪಿಸ್ಕಂಡ್ ಬರ್ತಾನಾ? ಹೆಂಗೆ?’
‘ನಿನ್ತೆಲಿ, ತಪ್ಪಿಸ್ಕಳ್ಳೋದ್ರಲ್ಲಿ ತೆಪರ ಎಕ್ಸ್‌ಪರ್ಟು. ದಿನಾ ಮನೇಲಿ ಅವನೆಂಡ್ತಿ ಪಮ್ಮಿ ಇವನ ಮೇಲೆ ಎಂತೆಂಥಾ ಅಸ್ತ್ರಗಳನ್ನ ಎಸೀತಾಳೆ ಗೊತ್ತಾ? ಸೌಟು, ಲಟ್ಟಣಿಗೆ, ಪ್ಲೇಟು, ಸಾಸರು... ಎಲ್ಲ ಮಿಸೈಲ್ ಸ್ಪೀಡೇ. ಇಲ್ಲೀತಂಕ ಒಂದಾದ್ರೂ ಇವನಿಗೆ ಬಡಿದಿದಾವಾ? ಅಷ್ಟು ಚೆನ್ನಾಗಿ ತಪ್ಪಿಸ್ಕೋತಾನೆ, ಡೋಂಟ್ ವರಿ’.
ಗುಡ್ಡೆ ಕೀಟಲೆಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.