
ಚುರುಮುರಿ: ಕುದುರೆ ವ್ಯಾಪಾರ!
‘ರೀ... ಈ ರಾಜಕೀಯದೋರು ಯಾವಾಗ ನೋಡಿದ್ರೂ ಕುದುರೆ ವ್ಯಾಪಾರ, ಕುದುರೆ ವ್ಯಾಪಾರ ಅಂತಿರ್ತಾರೆ, ಕತ್ತೆ ವ್ಯಾಪಾರ ಅಂತ ಯಾಕನ್ನಲ್ಲ?’ ಮಡದಿ ಕಾಫಿ ಕೊಡುತ್ತ ಕೇಳಿದಳು.
‘ರಾಜಕೀಯದಲ್ಲಿ ಕುರ್ಚಿ ಕಿತ್ಕಾಬೇಕು ಅಂದ್ರೆ ಯುದ್ಧ ಮಾಡ್ಬೇಕು. ಅದಕ್ಕೆ ಕುದುರೆಗಳು ಬೇಕು. ಕತ್ತೆಗಳನ್ನ ಇಟ್ಕಂಡು ಯುದ್ಧ ಮಾಡೋಕಾಗುತ್ತಾ?’ ಎಂದೆ ನಾನು. ನನಗೂ ಸರಿಯಾದ ಉತ್ತರ ಗೊತ್ತಿರಲಿಲ್ಲ.
‘ಆದ್ರೂ ಕುದುರೆ ಸಾಕೋದು ಬಾಳ ಕಷ್ಟ ಅಲ್ವಾ? ಅವಕ್ಕೆ ಹುಲ್ಲು, ಹುರುಳಿ ಹಾಕ್ಬೇಕು, ಬೆನ್ನು
ಉಜ್ಜಬೇಕು, ಬಾಲ ನೀವಬೇಕು... ಕತ್ತೆಗಳು ಹಂಗಲ್ಲ, ಹಗ್ಗ ಬಿಚ್ಚಿ ಓಡ್ಸಿದ್ರೆ ಎಲ್ಲಾದ್ರೂ ಮೇಯ್ಕಂಡು
ಬರ್ತವೆ...’
‘ನೀ ಹೇಳೋದೂ ನಿಜ ಅನ್ನು. ಕುದುರೆಗಳನ್ನ ಲಾಯದಲ್ಲಿ ಕಟ್ಟಿ ಹಾಕಿದ್ರೂ ಅವು ಲಾಯಲ್ಲಾಗಿರಲ್ಲ. ರೆಸಾರ್ಟೇ ಬೇಕು ಅಂತವೆ...’
‘ಅಲ್ಲ, ಒಂದೊಂದ್ ಕುದುರೆಗೆ ₹50 ಕೋಟಿನಂತೆ. ಅವಕ್ಕೆ ಯಾಕೆ ಅಷ್ಟು ರೇಟು?’ ಮಡದಿಗೆ ಕುತೂಹಲ.
‘ನಾಲ್ಕು ಕಾಲಿನ ಕುದುರೆಗಳಿಗೆ ಅಷ್ಟು ರೇಟಿಲ್ಲ. ಎರಡು ಕಾಲಿನ ಕುದುರೆಗಳಿಗೆ ಜಾಸ್ತಿ ರೇಟು...’
‘ಎರಡು ಕಾಲಿನ ಕುದುರೆಗಳಾ?’
‘ಹೌದು, ಅವಕ್ಕೆ ಡಿಮ್ಯಾಂಡ್ ಜಾಸ್ತಿ. ಅವು ಚಾ ಕುಡಿಯಾಕೇ ಡೆಲ್ಲಿಗೆ ಹೋಗ್ತವೆ ಗೊತ್ತಾ?’
‘ಗೊತ್ತಾತು ಬಿಡ್ರಿ, ನೀವು ಹೇಳೋ ಕುದುರೆಗಳು ಮಂತ್ರಿ ಸ್ಥಾನನೂ ಕೇಳ್ತಾವಂತೆ?’ ಮಡದಿ ನಕ್ಕಳು.
‘ಮಂತ್ರಿ ಸ್ಥಾನನೂ ಕೇಳ್ತವೆ, ಕೊಟ್ಟ ಮಾತು ಮರೀದಂಗೆ ಈಡೇರಿಸಿ ಅಂತ ಎಚ್ಚರಿಕೇನೂ ಕೊಡ್ತವೆ...’
‘ಹ್ಞಾ... ಕೊಟ್ಟ ಮಾತು ಅಂದ ಕೂಡ್ಲೆ ನೆನಪಾತು... ನೀವು ದೀಪಾವಳಿಗೆ ಸೀರೆ ಕೊಡಿಸ್ತೀನಿ ಅಂದಿದ್ರಿ, ಕೊಡಿಸಿಲ್ಲ. ಯಾವಾಗ ಕೊಡಿಸ್ತೀರಿ?’
‘ಖಂಡಿತ ಕೊಡಿಸ್ತೀನಿ, ಮುಂದಿನ ದೀಪಾವಳಿಗೆ...’ ನನ್ನ ಮಾತಿನ್ನೂ ಮುಗಿದಿರಲಿಲ್ಲ... ಕೈಲಿದ್ದ ಕಾಫಿ ಕಪ್ಪನ್ನು ಟೀಫಾಯಿ ಮೇಲೆ ಕುಕ್ಕಿ ಬಿಲ್ಲಿನಿಂದ ಬಿಟ್ಟ ಬಾಣದಂತೆ ಅಡುಗೆ ಮನೆಯತ್ತ ಮಾಯವಾಗಿ ಹೋದಳು ಮಡದಿ. ನಾನು ಪಿಟಿಕ್ಕನ್ನಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.