
ಚುರುಮುರಿ: ಸನಕಪುರದ ಕಾರಣಿಕ
ಕರ್ನಾಟಕದ ಜಾತ್ರೆ ನಡೆಸಕ್ಕೆ ಮಹಿಶೂರು ರಾಮಸಿದ್ಧರ ಒಕ್ಕಲು ಮತ್ತು ಸನಕಪುರದ ಕುಮಾರಶಿವನ ಒಕ್ಕಲಿನ ಮಧ್ಯೆ ಸ್ಯಾನೆ ಪೈಪೋಟಿ ಅದೆ. ಇವರೊಂದಿಗೆ ಕುಮತೂರು ಒಕ್ಕಲು, ಹೊಳೆಜಾರಿದ ಒಕ್ಕಲುಗಳೂ ಅದಾವೆ. ಇವರೆಲ್ಲಾ ಕೈಕಮಾಂಡು ದೇವರುಗಳಾದ ಸೋನಮ್ಮ ತಾಯಿ ಮತ್ತು ರಾಗಪ್ಪ ದೇವರಿಗೆ ನಡಕತ್ತರೆ.
‘ಹೋದಸಾರಿ ಕಾರಣಿಕದಲ್ಲಿ ರಾಮಸಿದ್ಧರ ಒಕ್ಕಲಿನೋರು ಭಾಳ ಖುಷಿಯಲ್ಲಿದ್ರು. ಅದಕ್ಕೆ ತಕ್ಕಂಗೆ ‘ಸದ್ಯಕ್ಕೆ ರಾಮಸಿದ್ಧರ ಒಕ್ಕಲು ಜಾತ್ರೆ ನಡೆಸಬೇಕಲೇ ಭೋಪರಾಕ್’ ಅಂತ ಕಾರಣಿಕವಾಗಿತ್ತು’ ಎಂದು ಕರ್ಮದರ್ಶಿಗಳು ವಿವರಿಸ್ತಾ ಇದ್ರು. ಜಾತ್ರೆ ಸಂಬಂಧ ಈ ಸಾರಿ ಸನಕಪುರದ ಕಾರಣಿಕ ನಮ್ಮ ಪರವಾಗೇ ಆತದೆ ಅಂತ ಅಲ್ಲಿನ ಒಕ್ಕಲಿನೋರು ಒಬ್ಬಿಟ್ಟು, ಪಾಯಸ ಮಾಡಕ್ಕೆ ರೆಡಿಮಾಡಿಕ್ಯತಾವ್ರಂತೆ.
‘ನಾವು ಮೂವತ್ತು ತಿಂಗಳು ಕಾಯೂದಲ್ದೆ ಖರ್ಚೂ ಕೊಟ್ಟುದವಿ. ಈಗ ನಮಗೇ ಜಾತ್ರೆ ನಾಯಕತ್ವ ಕೊಡಬಕು’ ಅಂತ ಕುಮಾರಶಿವನ ಒಕ್ಕಲಿನೋರ
ಬೇಡಿಕೆ.
‘ನೀವೊಬ್ಬರೇ ತ್ಯಾಗ ಮಾಡಿಲ್ಲ. ನಾವೂ ಕಾಸು ಕೊಟ್ಟಿದ್ದೀವಿ’ ಅಂತ ಬ್ಯಾರೆ ಒಕ್ಕಲಿನೋರೂ ಬಾಯಿ
ತೆಗಿದ್ರು.
ರಾಮಸಿದ್ಧರ ಒಕ್ಕಲಿನೋರು ‘ನಾವು ಜಾತ್ರೆ ಬುಡಕುಲ್ಲ’ ಅಂತ ಪಟ್ಟು ಹಾಕ್ಯವ್ರೆ’ ಅಂದ್ರು ಕರ್ಮದರ್ಶಿಗಳು.
ಸೋನಮ್ಮ ತಾಯಿ, ರಾಗಪ್ಪ ದೇವರು ಗುಡಿ ಬುಟ್ಟು ಈಚೆಗೇ ಹೊಂಡಲ್ಲ. ಕರಗಯ್ಯ ಮಾತ್ರ ನನಗೆ ಹೇಳಕ್ಕೆ ಏನೂ ಇಲ್ಲ. ಅಮಿಕ್ಕಬಲ್ ಸೆಟಲ್ಮೆಂಟಾತದೆ ತಡೀರಿ ಅಂತ ಹೇಳ್ತಾ ಅದೆ. ಇದರ ಮಧ್ಯೆ ನಂದೆಲ್ಲಿಕ್ಕನ ಅಂತ ಜಾತ್ರೆ ಕಮಿಟಿ ನೆಂಬರಾಗಕ್ಕೆ ಆತುರಗೆಟ್ಟೋರು ಓಡಾಡ್ತಿದ್ರು. ಇವರ ಆಟಗುಳಿ ಕಂಡು ಜನ, ‘ಕೆಲಸವಿಲ್ಲದೋನ ಥರ ನಮ್ಮ ಬ್ಯಾಕು ತಟ್ಟುತಾವ್ರಲ್ಲ ಇವರು’ ಅಂತ ಮುಸಿಮುಸಿ ನಗ್ತಿದ್ರು. ಅಷ್ಟರಲ್ಲಿ ಕಾರಣಿಕ ಸುರುವಾತು.
ಈ ಗಲಾಟೇಲಿ ಕರಗಯ್ಯ ನುಡಿದ ಕಾರಣಿಕವ ಯಾರ‍್ಯಾರು ಕೇಳಿಸಿಗಂದ್ರೋ ಗೊತ್ತಿಲ್ಲ. ಕುಮಾರಶಿವನ ಒಕ್ಕಲೋರು ಅದ್ಯಾಕೋ ‘ನಾವೇ ಬ್ಯಾರೆ ಜಾತ್ರೆ ನಡುಸುಮಾ ಬಲ್ಲಿರ್ಲಾ’ ಅಂತ ಎದ್ದೋದ್ರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.