ADVERTISEMENT

ಚುರುಮುರಿ: ಗೂಗಲ್ ಕಥೆ!

ಬಿ.ಎನ್.ಮಲ್ಲೇಶ್
Published 28 ನವೆಂಬರ್ 2024, 23:38 IST
Last Updated 28 ನವೆಂಬರ್ 2024, 23:38 IST
<div class="paragraphs"><p>ಚುರುಮುರಿ: ಗೂಗಲ್ ಕಥೆ!</p></div>

ಚುರುಮುರಿ: ಗೂಗಲ್ ಕಥೆ!

   

ಗೂಗಲ್ ಮ್ಯಾಪ್ ನೋಡ್ಕಂಡು ಕಾರೊಂದು ಸೇತುವೆಯಿಂದ ಬಿದ್ದ ಸುದ್ದಿ ಓದಿ ನನಗೆ ಸಿಟ್ಟು ಬಂತು. ಈ ಗೂಗಲ್ ಯಾಕೆ ಪದೇ ಪದೇ ದಿಕ್ಕು ತಪ್ತಾ ಐತೆ? ಒಂದು ಚಾಟಿ ಬೀಸೋಣ ಅಂತ ಚಾಟಿಂಗ್ ಶುರು ಮಾಡಿದೆ.

‘ಹಲೋ ಗೂಗಲ್, ಯಾಕೆ ಪದೇ ಪದೇ ದಿಕ್ಕು ತಪ್ತಾ ಇದೀಯ?’

ADVERTISEMENT

‘ದಿಕ್ಕುಗಳೇ ಸರಿಯಿಲ್ಲ, ನಾನೇನ್ ಮಾಡ್ಲಿ?’ ಗೂಗಲ್ ಉತ್ತರಿಸಿತು.

‘ಅಲ್ಲ, ನೀನು ಸರಿಯಾಗಿ ದಾರಿ ತೋರಿಸ್ತೀಯ, ಕೇಳಿದ್ದಕ್ಕೆಲ್ಲ ಕರೆಕ್ಟ್ ಉತ್ತರ ಕೊಡ್ತೀಯ ಅನ್ಕಂಡಿದ್ದೆ...’

‘ಹೌದು, ಕೊಡ್ತೀನಿ, ಎನಿ ಡೌಟ್?’

‘ಇದು ಸೋಪಿನ ಪುಡಿ ಜಾಹೀರಾತಲ್ಲ,
ಈಗ ಚನ್ನಪಟ್ಣ ಎಲ್ಲೈತೆ ಹೇಳು?’

‘ಅದೀಗ ಯೋಗೀಶ್ವರ್ ಹತ್ರ ಐತೆ’.

‘ಥೋ ಹಂಗಲ್ಲ, ಹೋಗ್ಲಿ ನಿಖಿಲ್ ಗೊತ್ತಾ?’

‘ಗೊತ್ತು, ‘ಎಲ್ಲಿದ್ದೀಯಪ್ಪಾ’ ತಾನೆ?’

‘ಕರೆಕ್ಟ್, ಆಮೇಲೆ ಜಿಟಿಡಿ ಗೊತ್ತಾ?’

‘ನಂಗೆ ಟಿಟಿಡಿ ಗೊತ್ತು, ಅಂದ್ರೆ ತಿರುಮಲ ತಿರುಪತಿ ದೇವಸ್ಥಾನ, ಇದ್ಯಾರು ಜಿಟಿಡಿ?’

‘ಜಿ.ಟಿ.ದೇವೇಗೌಡ ಕಣಯ್ಯ, ಅವರ ಮುಂದಿನ ದಾರಿ ಏನು?’

‘ತೆನೆ ಇಳಿಸಿ ‘ಕೈ’ ದಾರಿ ಹಿಡೀಬಹುದು’.

‘ಓಕೆ, ಈ ಬಿಜೆಪಿ ಕತೆ ಹೆಂಗೆ?’

‘ಅದೀಗ ಮನೆಯೊಂದು, ನಾಲ್ಕು ಬಾಗಿಲು. ಮೂರು ಶಿಕಾರಿಪುರ, ಒಂದು ವಿಜಯಪುರ...’

‘ಈ ಬಿರುಕು ಮುಚ್ಚೋದೆಂಗೆ?’

‘ನಮೋ ಸಿಮೆಂಟ್ ಬಳಸಿ’.

‘ಆಯ್ತಪ್ಪ, ಈ ಮುಡಾ ಕತೆ ಏನಾಗಬಹುದು?’

‘ಮುಡಾ... ಅದು ನಿಗೂಢ!’ ಗೂಗಲ್ ನಕ್ಕಿತು.

‘ನಿನ್ತೆಲಿ, ಹೋಗ್ಲಿ ನಿಂಗೆ ಈ ವರ್ಲ್ಡ್ ಫೇಮಸ್ ಬಿ.ಎನ್.ಮಲ್ಲೇಶ್ ಗೊತ್ತಾ?’

‘ಗೊತ್ತಿಲ್ಲ, ಇಲ್ಲಿ ಅದೇನೋ ತೆಪರೇಸಿ ಅಂತ ತೋರಿಸ್ತಿದೆ’.

ನಾನು ಪಿಟಿಕ್ಕನ್ನದೆ ಚಾಟಿಂಗ್ ಕ್ಲೋಸ್ ಮಾಡಿ ಮೇಲಕ್ಕೆದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.