ಚುರುಮುರಿ: ಹೂ-ಡಿಕೆ ಚರ್ಚೆ!
‘ಅದೇನೋ ಇನ್‌ವೇಸ್ಟ್ ಕರ್ನಾಟಕ ಅಂತೆ, 10 ಲಕ್ಷ ಕೋಟಿ ದುಡ್ಡು ಹರ್ಕಂಡ್ ಬತ್ತದಂತೆ ಕಣ್ಲಾ’ ಎಂದ ಗುದ್ಲಿಂಗ ಹರಟೆಕಟ್ಟೇಲಿ.
‘ಅದು ಇನ್‌ವೇಸ್ಟ್ ಅಲ್ಲಲೇ, ಇನ್‍ವೆಸ್ಟ್ ಕರ್ನಾಟಕ’ ತಿದ್ದಿದ ಮಾಲಿಂಗ. ‘ಆದ್ರೆ ನಮ್ ರಾಜಕೀಯದೋರ್ಗೆ ಉಪ್ಯೋಗ ಆಗೋ ಅಂತದ್ದೇನೂ ಕಂಡಂಗಾಗ್ಲಿಲ್ಲ’ ಎಂದ ಗುದ್ಲಿಂಗ.
‘ದುಡ್ಡು ಬರ್ಬೇಕು ಅಂತ ನೋಟು ಇಂಡಸ್ಟ್ರಿ ಮಾಡಕ್ಕಾಗುತ್ತೇನ್ಲಾ? ಕೂತ್ಕಳ್ಳ ಸುಮ್ಕೆ’ ಎಂದ ಕಲ್ಲೇಶಿ.
‘ಅಂಗಲ್ಲಲೇ, ಈಗ ನೋಡು, ಸರ್ಕಾರ ಲಕ್ಷಾಂತರ ಎಕರೆ ಒತ್ತುವರಿ ತೆರವು ಮಾಡಕ್ಕೆ ಒಂಟದೆ. ಅಂದ್‌ಮ್ಯಾಗೆ ಬುಲ್ಡೋಜರ್ ಕಂಪನಿಗೆ ಪ್ರೋತ್ಸಾಹ ಕೊಡ್ಬೇಕಲ್ವಾ?’
‘ಅದ್ಯಾವುದೋ ಊರಲ್ಲಿ ಕಟ್ಟಿದ ಮನೇನೆ ಅನಾಮತ್ ತಳಪಾಯದ ಸಮೇತ ಹಿಂದಕ್ಕೆ ಸರಿಸವ್ರಂತೆ. ಇಂಗೇ ಇವತ್ತು ಹಿಂದಕ್ಕೆ ಸರ್ಸದು, ಸರ್ವೆ ಆದ್‌ಮ್ಯಾಗೆ ಮತ್ತೆ ಎತ್ತಿ ಮುಂದಕ್ಕೆ ಮಡಿಕ್ಕಳಾದು. ಒಡೆಯೋ ಪ್ರಶ್ನೆನೇ ಬರಕ್ಕಿಲ್ವಲ್ಲ’.
‘ಅಂಗಾರೆ ಆ ‘ಹೌಸ್ ಮೂವರ್’ ಕಂಪನಿನೇ ತಂದು ನಮ್ ರಾಜ್ಯದಲ್ಲಿ ಮಡಿಕ್ಕಬೇಕು ಬುಡು. ಉದ್ಯೋಗನೂ ಸೃಷ್ಟಿ ಆಯ್ತದೆ’.
‘ಉದ್ಯೋಗದ ವಿಷಯ ಬಿಡ್ಲಾ. ಯಾರಿಗ್ ಬೇಕು ಹೂಡಿಕೆ? ಉದ್ಯೋಗ? ಇಂಡಸ್ಟ್ರಿಯೋರು, ರಾಜಕೀಯದೋರು ಇಬ್ರೂ ತಮ್ ಮೂಲ ಸೌಕರ್ಯ ನೋಡ್ಕತಾರೆ ಅಷ್ಟೇ!
‘ಅದೇನೋ ಸರೀನೆ, ಈಗ ಅಕ್ಕಿ ತಯಾರ್ ಮಾಡೋ ಕಂಪನಿಗಳಿದ್ರೆ ಅರ್ಜೆಂಟ್ ಕರುಸ್ಬೇಕು’.
‘ಇಂಡಸ್ಟ್ರಿ ಮಾಡ್ತೀವಿ ಅಂತ ಸಾವಿರಾರು ಎಕ್ರೆ ರೈತನ್ ನೆಲ ಗೆಬರ್ಕಂಡ್ರೆ ಅಕ್ಕಿ ಏನ್ ಆಕಾಶದಿಂದ ಉದುರುತ್ತೇನ್ಲಾ?’
‘ಅಂಗಿದ್ಮೇಲೆ ಊರಾಗಿರೋ ಬಂಡೆ ಗಿಂಡೆ ಎಲ್ಲಾ ಎಂಗೂ ಅರ್ಧಕ್ಕರ್ಧ ಒಡ್ದವ್ರೆ. ಪೂರಾ ಒಡೆದು ಸಮತಟ್ ಮಾಡ್ಬುಟ್ರೆ ಭತ್ತ ಬೆಳೀಬಹುದು. ಬಂಡೆ ಒಡೆಯೋ ಇಂಡಸ್ಟ್ರಿಗೇ ಮೊದ್ಲು ಪ್ರಿಫರೆನ್ಸ್ ಕೊಟ್ರಾಯ್ತು’.
‘ಈಗ ಮಾಡ್ತಿರೋದು ಅದೇ! ಬಂಡೆ ಒಡೆಯೋ ಕೆಲಸ. ಈ ಮೈತ್ರಿ, ಕೂಡಿಕೆ ಅಂದ್ರೆ ಹೂಡಿಕೆಗೆ ಬಂಡೆನೇ ಬೇಕಾಗಿತ್ತು. ಈಗ ಹೂ-ಡಿಕೆ? ಎನ್ನುವಂತಾಗಿದೆ’ ಎಂದ ಪರ್ಮೇಶಿ.
ಎಲ್ಲಾ ಗೊಳ್ಳನೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.