ADVERTISEMENT

ಚುರುಮುರಿ: ಮೆಡಿಕಲ್ ಮಾಯೆ

ಸಿ.ಎನ್.ರಾಜು
Published 4 ಮಾರ್ಚ್ 2022, 23:30 IST
Last Updated 4 ಮಾರ್ಚ್ 2022, 23:30 IST
   

‘ಮಗಳ ಪಿಯು ಪರೀಕ್ಷೆ ಮುಗಿಯುವವರೆಗೂ ಮನೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇನೆ, ಗದ್ದಲ ಮಾಡಬೇಡಿ, ಟೀವಿ ಆನ್ ಮಾಡಬೇಡಿ, ಮೊಬೈಲ್ ಮ್ಯೂಟ್ ಮಾಡಿ...’ ಎಂದಳು ಅನು.

‘ಮಗಳ ಓದಿಗೆ ಡಿಸ್ಟರ್ಬ್ ಆಗದಂತೆ ಪಾತ್ರೆ, ಒಗ್ಗರಣೆ ಸೌಂಡು ಇಲ್ಲದೆ ಅಡುಗೆ ಮಾಡು. ಕಾಂಪೌಂಡಿನಲ್ಲಿ ಕುಂಯ್‍ಗುಡುವ ನಾಯಿಯನ್ನು ನಿನ್ನ ತವರು ಮನೆಯಲ್ಲಿ ಕಟ್ಟಿಹಾಕಿ ಬಾ’ ಗಿರಿ ಹೇಳಿದ.

‘ಆಗಲಿ, ಹಾಸಿಗೆ ಮೇಲೆ ಮುಲುಕಾಡುವ ನಿಮ್ಮ ಅಮ್ಮನನ್ನು ನಿಮ್ಮೂರಿಗೆ ಕಳಿಸಿ. ಸ್ನೇಹಿತರು, ಸಂಬಂಧಿಗಳನ್ನು ಮನೆಗೆ ಕರೆಯಬೇಡಿ, ಪರೀಕ್ಷೆ ಮುಗಿಯುವವರೆಗೂ ಯಾವ ಸಂಬಂಧಗಳೂ ಬೇಡ’.

ADVERTISEMENT

‘ದೇವರಿಗೆ ತುಪ್ಪದ ದೀಪ ಹಚ್ಚಿ, ಮಗಳಿಗೆ ಮೆಡಿಕಲ್ ಸೀಟು ಕರುಣಿಸು ಅಂತ ಬೇಡಿಕೊ. ಮಗಳಿಗೆ ಹೆಲ್ತ್ ಪ್ರಾಬ್ಲಂ ಆದಾಗ ತಕ್ಷಣ ಬಂದು ಟ್ರೀಟ್‍ಮೆಂಟ್ ಕೊಡಲು ಡಾಕ್ಟರ್‌ಗೆ ರಿಕ್ವೆಸ್ಟ್ ಮಾಡಿದ್ದೇನೆ. ಡೌಟ್ ಕ್ಲಿಯರ್ ಮಾಡಲು ಟ್ಯೂಷನ್ ಟೀಚರ್ ಮನೆಗೇ ಬರ್ತೀನಿ ಅಂತ ಹೇಳಿದ್ದಾರೆ. ಮಗಳು ಪರೀಕ್ಷೆಯಲ್ಲಿ ಔಟಾಫ್ ಔಟ್ ಸ್ಕೋರ್ ಮಾಡಿ ಮೆಡಿಕಲ್ ಸೀಟ್ ತಗೊಬೇಕು’.

‘ಈ ಪರೀಕ್ಷೆಯಲ್ಲಿ ಸ್ಕೋರ್ ಮಾಡೋದು ಮುಖ್ಯವಲ್ಲ, ನೀಟ್‍ನಲ್ಲಿ ಸೆಲೆಕ್ಟ್ ಆದರಷ್ಟೇ ಮೆಡಿಕಲ್ ಸೀಟು. ಮ್ಯಾನೇಜ್‍ಮೆಂಟ್ ಸೀಟಿಗೆ ಕೋಟಿಗಟ್ಟಲೆ ದುಡ್ಡು ಕೊಡೋದು, ಉಕ್ರೇನ್‍ನಂಥಾ ದೇಶಗಳಿಗೆ ಮಗಳನ್ನು ಕಳಿಸೋದು ಎರಡೂ ಕಷ್ಟ... ನಮ್ಮಂಥವರಿಗಲ್ಲ ಮೆಡಿಕಲ್ ಸೀಟು...’ ಅನು ನೊಂದುಕೊಂಡಳು.

‘ಬಡವರು, ಕನ್ನಡಿಗರ ಪಾಲಿನ ಮೆಡಿಕಲ್ ಸೀಟುಗಳು ಉತ್ತರ ಭಾರತದವರ ಪಾಲಾಗ್ತಿವೆಯಂತೆ, ನೀಟ್ ಪದ್ಧತಿ ರದ್ದು ಮಾಡಿ ಅಂತ ಹೋರಾಟ ಶುರುವಾಗಿದೆ. ಕನ್ನಡದಲ್ಲಿ ನೀಟ್ ಪರೀಕ್ಷೆ ಬರೆಯುವಂತಾಗಿದ್ದರೆ ನಾನೂ ಡಾಕ್ಟರ್ ಆಗ್ತಿದ್ದೆ’.

‘ನೀಟ್‌ ಇರಲಿ, ಮೊದಲು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಪರೀಕ್ಷೆಯಲ್ಲಿ ಪಾಸಾಗಿ ಪರಿಷತ್ತಿನ ಸದಸ್ಯತ್ವ ಉಳಿಸಿಕೊಳ್ಳಿ...’ ಎಂದು ಅನು ಹಂಗಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.