ನಮ್ಮ ರಾಜಕಾರಣಿಗಳಿಗೆ ವತ್ತಾರೆಯಿಂದ ಸಂಜೇಗಂಟ ಜಗಳ ಮಾಡದುಬುಟ್ಟು ಬ್ಯಾರೆ ಕ್ಯಾಮೆ ಇರನಿಲ್ಲ. ಕೈ ಪಕ್ಷದಲ್ಲಿ ಸಿಎಂ ಕುರ್ಚಿಗೆ ಕಿತ್ತಾಟ, ಕಮಲದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾರಾಮಾರಿ ನಡೀತಿತ್ತು. ಮಣ್ಣಿನಮಕ್ಕಳ ಪಕ್ಷದಲ್ಲಿ ಯಾರು, ಯಾವುದಕ್ಕೆ, ಯಾಕೆ ಜಗಳಾಡಬೇಕು ಅಂತ ಗೊತ್ತಾಗದೇ ಕನ್‌ಫ್ಯೂಸಾಗಿದ್ದರು. ರೋಸಿಹೋದ ಜನ ‘ಯಾಕಿಂಗೆ ನಮ್ಮನ್ನ ಸತಾಯಿಸ್ತೀರೊ.
ಏನಾದ್ರೂ ಡಿಸೈಡ್ ಮಾಡಿಕ್ಯಂದು ಸಾಯ್ರಿ’ ಅಂತ ಮಕ್ಕುಗೀತಿದ್ರು.
ಆಯ್ತು ಅಂತ ಎಲ್ಲಾ ಪಕ್ಷದೋರೂ ಸಭೆ ಸೇರಿದ್ರು. ಅಧ್ಯಕ್ಷರು, ಸಿಎಂ ಚೇರು ಬೆನ್ನಿಗೇ ಕಟ್ಕಂದು ಬಂದುದ್ದ ಕಂಡು ‘ಏನು ಚೇರು ಬುಡಂಗೇ ಇಲ್ವೋ?’ ಅಂತ ಮಣ್ಣಿನ ಮಕ್ಕಳು ಕಿಚಾಯಿಸಿದ್ರು.
‘ಹೂ ಕನ್ರಿ. ಸೆಪ್ಟೆಂಬರಲ್ಲಿ ಕ್ರಾಂತಿ ಆಗತೈತೆ ಅಂತ ಅಣ್ಣಾರು ಶಕುನ ನುಡಿದವ್ರೆ. ಯಾವೋನಾದರೂ ಬಂದು ಚೇರಿಗೆ ಅಮರಿಕ್ಯಂದರೇನು ಮಾಡದು. ನಮ್ಮ ಜೀವ ಚೇರಲ್ಲೇ ಅದೆ’ ಅಂದ್ರು ಇಬ್ಬರೂ ಒಟ್ಟಿಗೆ.
‘ನೀವು ನೀವೇ ಮನಸ್ತಾಪ ಮಾಡಿಕ್ಯಂದು ಒಬ್ಬರ ಮ್ಯಾಲೊಬ್ಬರು ಬಲವಂತದ ಕ್ರಮ ತಕ್ಕಂದು ವ್ಯಾಜ್ಯಭಾರ ಮಾಡಿಕ್ಯಬ್ಯಾಡಿ ಕನ್ರೋ. ಎಲ್ಲಾರು ಒಂದಾಗಿ ಜನವ ಹುರಕಂದು ತಿನ್ನಾದೆಂಗೆ ಅಂತ ನೋಡಿ’ ಅಂತಂದ ಸೀನಿಯರ್ ರಾಜಕಾರಣಿ ಸಲಹೆ ಒಪ್ಪಿತವಾಯ್ತು. ಅಧಿಕಾರ ಹಂಚಿಕೆ ಸೂತ್ರ ತಯಾರಿಸೋ ಜವಾಬ್ದಾರಿ ಅವರಿಗೇ ಕೊಟ್ರು.
‘ನೋಡ್ರಲಾ ದಿನಕ್ಕೊಂದು ಸಿಎಂ, ಅಧ್ಯಕ್ಸರ ದರ್ಬಾರು. ಸೋಮಾರ, ಮಂಗ್ಳಾರ ಕೈ ಆಡಳಿತ ನಡೀಲಿ. ಬುಧವಾರ, ಗುರುವಾರ ಕಮಲದ ಕರಾಮತ್ತು. ಶುಕ್ರವಾರ ಮಣ್ಣಿನ ಮಕ್ಕಳು ಉಳುಮೆ ಮಾಡಿಕ್ಯಲಿ. ಶನಿವಾರ, ಭಾನುವಾರ ಅಧಿಕಾರಿಗಳು ಇ–ಕ್ಯಾತೆ ಮಾಡಿಕ್ಯತ್ತರೆ’ ಅಂತ ನಾಯಕರು ಪ್ರೋಗ್ರಾಂ ಕೊಟ್ಟರು. ಖುಷಿಯಾದ ಮುದಿನಾಯಕರೆಲ್ಲಾ ತಾವೇ ಮೊದಲು ಸತ್ಪ್ರಜೆಗಳ ತಲೆ ಒಡೀಬೇಕು ಅಂತ ನುಗ್ಗಿ ಅಂಗಿ-ಪಂಚೆ ಹರಕತಿದ್ದುದ್ದ ಕಂಡು ಜನ ‘ಇವು ಈ ಜಲ್ಮದೇಲಿ ಉದ್ಧಾರಾಗಕುಲ್ಲ ಕನ’ ಅಂತ ತಲೆತಲೆ ಕೆಚ್ಚಿಕ್ಯಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.