ADVERTISEMENT

ಚುರುಮುರಿ: ಅಪ್ಪುಗೆ ಪರೀಕ್ಷೆ

ಸುಮಂಗಲಾ
Published 7 ಆಗಸ್ಟ್ 2022, 22:30 IST
Last Updated 7 ಆಗಸ್ಟ್ 2022, 22:30 IST
   

ಬೆಕ್ಕಣ್ಣ ಬೆಳಗಿನಿಂದ ಏನೂ ತಿನ್ನದೇ ಮುಖ ವಣಗಿಸಿಕೊಂಡು ಕೂತಿತ್ತು.

‘ಏನಲೇ... ಬೆಲೆಯೇರಿಕೆ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಾಕ್ ಹತ್ತೀಯೇನ್’ ಕಕ್ಕುಲಾತಿಯಿಂದ ಕೇಳಿದೆ.

‘ಪ್ರತಿಭಟನೆ, ಸತ್ಯಾಗ್ರಹ ಇವೆಲ್ಲಾ ಓಲ್ಡ್ಫ್ಯಾಶನ್. ಇದು ದೇಶಭಕ್ತಿ ರಾಕೆಟ್ ಉಡಾಯಿಸೋ ಕಾಲ. ಸಿದ್ದರಾಮೋತ್ಸವ ಮುಗಿದ ಮ್ಯಾಗೆ ನಿದ್ದಿ, ಊಟ ಏನೂ ಮಾಡ್ತಿಲ್ಲ ಅಂತ ಈಶೂಮಾಮಾ ಹೇಳ್ಯಾನ. ಅಂವ ಊಟ ಮಾಡದಿದ್ದರ ನನಗೆ ಹೆಂಗೆ ತುತ್ತು ವಳಗ ಇಳಿತೈತಿ? ಅರಮನೆ ಮೈದಾನದಾಗೆ ಯುಡ್ಯೂರಜ್ಜಾರ ಹುಟ್ಟುಹಬ್ಬ ಮಾಡಿದ್ರಲ್ಲ, ಆವಾಗೂ ಇಷ್ಟ್ ಮಂದಿ ಸೇರಿರಲಿಲ್ಲಂತ’ ಲೊಚಗುಟ್ಟಿದ ಬೆಕ್ಕಣ್ಣ ಲ್ಯಾಪ್‌ಟಾಪಿನಲ್ಲಿ ತಲೆಹುದುಗಿಸಿ ಏನೋ ಕೋಡಿಂಗ್ ಮಾಡುತ್ತಲೇ ಇತ್ತು.

ADVERTISEMENT

‘ನೋಡಿಲ್ಲಿ... ನಾ ಒಂದ್ ಅಪ್ಪುಗೆ ಪರೀಕ್ಷೆ ಟೂಲ್ ಕಂಡುಹಿಡಿದೀನಿ. ಯಾರಾರ ಇಬ್ಬರು ಅಪ್ಪಿಕೊಂಡಿದ್ದ ವಿಡಿಯೊ ಇದಕ್ಕ ಅಪ್ಲೋಡ್ ಮಾಡಿದ್ರ, ಅವರು ಖರೇ ಪ್ರೀತಿ, ವಿಶ್ವಾಸದಿಂದ ಅಪ್ಪಿಕೊಂಡಾರೋ ಅಥವಾ ‘ಎದುರು ಪ್ರೀತಿ, ಬೆನ್ನಿಗೆ ಚೂರಿ’ ಅನ್ನೋ ಮನಸ್ಸಿನಿಂದ ಅಪ್ಪಿಕೊಂಡಾರೋ ಅಂತೆಲ್ಲ ಕಂಡ್ ಹಿಡಿತೈತಿ’ ಎಂದು ಹೆಮ್ಮೆಯಿಂದ ತೋರಿಸಿತು.

ನಾನು ತಲೆ ಕೆರೆದುಕೊಂಡೆ.

‘ಮೊನ್ನೆ ಹುಲಿಯಾಮಾಮ, ಬಂಡೆಮಾಮಾ ಅಪ್ಪಿಕೊಂಡು, ಕೈಕೈ ಹಿಡಕೊಂಡಿದ್ದು ಎಲ್ಲಾ ಹುಸಿಪ್ರೀತಿ, ಬೋಗಸ್ ಅಂತ ಕಮಲಕ್ಕನ ಮನಿಯವರು ಹೇಳಿದ್ರಲ್ಲ... ಹಂತಾ ವಿಡಿಯೊ ಇದಕ್ಕ ಅಪ್ಲೋಡ್ ಮಾಡಿದರ, ಅವರು ಅಪ್ಪಿಕೊಂಡಿರೊ ರೀತಿ, ಅವರ ಮುಖಭಾವ ಎಲ್ಲಾ ವಿಶ್ಲೇಷಣೆ ಮಾಡಿ, ಎಷ್ಟ್ ಪರ್ಸೆಂಟ್ ಖರೇ ಪ್ರೀತಿ, ಎಷ್ಟ್ ಪರ್ಸೆಂಟ್ ಸುಳ್ ಪ್ರೀತಿ ಅನ್ನೂದನ್ನ ಹೇಳತೈತಿ’ ಎಂದು ತೋರಿಸಿತು.

‘ಕಮಲಕ್ಕನ ಮನ್ಯಾಗೆ ರಗಡ್ ಐಟಿ ಮಂದಿ ಅದಾರಲೇ, ಬಹುಶಃ ಹಿಂತಾ ಪರೀಕ್ಷೆ ಟೂಲ್ ಅವರತ್ರ ಐತಿ. ಅದಕ್ಕ ಯಾವಾಗ ನಿಮ್ಮ ಹುಲಿಯಾಮಾಮ, ಮತ್ತ ಬಂಡೆಮಾಮಾ ಅಪ್ಪಿಕೊಂಡ್ರೂ, ಅದು ಬಲಾತ್ಕಾರದ ಅಪ್ಪುಗೆ ಅಂತ ತಕ್ಷಣ ಅವರು ಒದರತಾರ’ ಎಂದೆ.

ಬೆಕ್ಕಣ್ಣ ಬಿದ್ದರೂ ಮೀಸೆ ಮಣ್ಣಾಗಿಲ್ಲವೆನ್ನುವಂತೆ ‘ಎಷ್ಟ್ ‘ಶಾ’ಣೇರಿದ್ದಾರ ನೋಡು’ ಎಂದಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.