ADVERTISEMENT

ಕಿಸ್ಸಾ ಕುರ್ಸಿ ಕಾ...!

ಲಿಂಗರಾಜು ಡಿ.ಎಸ್
Published 9 ಡಿಸೆಂಬರ್ 2019, 20:15 IST
Last Updated 9 ಡಿಸೆಂಬರ್ 2019, 20:15 IST
   

ಉಪಚುನಾವಣೆ ಎಫೆಕ್ಟ್‌ ನೋಡಮು ಬಾ ಅಂತ ಕರೆದ ತುರೇಮಣೆಯ ಜೊತೆಗೆ ರಾಜಕೀಯ ನಾಯಕರ ಮನೇತಾವ್ಕೆ ಹೋದೋ. ಮೊದಲು ಹೋಗಿದ್ದು ಯಡೂರಪ್ಪಾರ ಮನೆಗೆ. ಅಲ್ಲಿ ಪಕ್ಷಿಗಳು, ಓತಿಕ್ಯಾತಗಳು ಗಿಜಿಗುಡತಾ ಇದ್ದೋ!

‘ಎಲ್ಲಾ ಅಳಿಯಂದ್ರಿಗೂ ನಾವು ನ್ಯಾಯ ಕೊಡ್ತೀವಿ’ ಅಂದ ಸಿ.ಎಂ, ‘ಸರ್ಕಾರ ಬೀಳಿಸುವಲ್ಲಿ ತಮ್ಮ ಹೋರಾಟವನ್ನು ಗೌರವಿಸಿ ನೀಡಿದ ಮಂತ್ರಿ ಪದವಿ’ ಅಂತ ಬರೆದಿದ್ದ ಪ್ರಶಸ್ತಿಪತ್ರ ಕೊಟ್ರು. ಎಲ್ಲರೂ ‘ಸಾಧ್ಯವಾದಷ್ಟು ಅಭಿವೃದ್ಧಿನೇ ನಮ್ಮ ಗುರಿ’! ಅಂದ್ರು. ಆಚೆಕಡೆ ಕೆಲವರು ಹಾಲಿ ಮಂತ್ರಿಗಳು ತಾವು ಮಾಜಿಯಾಗುವ ಸಾಧ್ಯತೆ ಲೆಕ್ಕಾಚಾರ ಹಾಕುತ್ತಾ ನಿರಾಶಾವಾದಿಗಳಾಗತೊಡಗಿದ್ದರು.

ಜನ ಕೈಕೊಟ್ಟ ಕಾರಣವಾಗಿ ಹುಲಿಯಾ ಸಿದ್ದಣ್ಣ ತಲೆ ಮೇಲೆ ಟವಲ್ ಹಾಕಿಕೊಂಡು ಕೂತಿದ್ದರು. ಅಲ್ಲಿ ಯಾರೋ ‘ಹೌದೋ ಹುಲಿಯಾ ಯಾಕಿಂಗಾಯ್ತು?’ ಅಂದ್ರು. ಸಿಟ್ಟಾದ ಸಿದ್ದಣ್ಣ ‘ಲೇಯ್ ಕಪಾಳಕ್ಕೊಡೀರ‍್ಲಾ ಅವನಿಗೆ. ಅಮಿಕ್ಕಂಡು ಕೂತ್ಕಳೋ’ ಅಂತ ಬೈದರು. ‘ನೋಡ್ರೀ ಬಿಜೆಪಿಯೋರು ಮಹಾರಾಷ್ಟ್ರದಿಂದ ಟನ್ನುಗಟ್ಟಲೆ ಈರುಳ್ಳಿ ತರಿಸಿ ಹಂಚಿ ಗೆದ್ದವರೆ. ಅದುಕ್ಕೇ ಘಾಟು ಜಾಸ್ತಿಯಾಗದೆ’ ಅಂತ ಗಡ್ಡ ಕೆರಕಂಡು ಸುಮ್ಮಗಾದರು.

ADVERTISEMENT

ಛದ್ಮನಾಭ ನಗರದಲ್ಲಿ ಶೋಕದ ವಾತಾವರಣ ಇತ್ತು. ದೊಡ್ಡೋರು ಮಾತಾಡ್ತಿದ್ದರು. ‘ನೋಡ್ರೀ ತಳಮಟ್ಟದಿಂದ ಪಕ್ಷ ಕಟ್ತೀವಿ. ಇನ್ನು ಆರು ತಿಂಗಳಲ್ಲಿ ಮತ್ತೆ ಅಧಿಕಾರಕ್ಕೆ ಬರ್ತೀವಿ’ ಅಂತ ಪಂಚೆ ಕಟ್ಟಿ ಮೇಲೆದ್ದರು. ಟುಮಾರಣ್ಣ ‘ನಾನು, ನಮ್ಮಣ್ಣ, ನಮ್ಮಪ್ಪ ಮೂರೂ ಜನರ ಮೈ-ತ್ರೀ ವಿಚಾರಾನ ಜನ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಬ್ರದರ್’ ಅಂತ ಕಣ್ಣೀರು ಒರೆಸಿಕೊಂಡರು. ಆಚೆಕಡೆ ನಿಂಬೆಹಣ್ಣು ಈಸಿಕ್ಯಂಡು ಅಲ್ಲಿಂದ ಕಡೆದು ಮುಂದಕ್ಕೆ ಬಂದೋ.

ವಿಧಾನಸೌಧದತಾವು ಪಕೋಡ ಮಾಡ್ತಿದ್ದ ಅಜ್ಜಿಯೊಬ್ಬಳು ‘ಮುದ್ದೇಗೆ ನೆಂಚಿಕಳಾಕೂ ಈರುಳ್ಳಿ ಸಿಕ್ಕತಿಲ್ಲವಲ್ರೋ ಶನ್ಯೇಸಿ ನನ ಆಟುಗಳ್ಳರಾ’ ಅಂತ ನೆಟಿಗೆ ಮುರಿಯುತ್ತಿದ್ದಳು. ತುರೇಮಣೆ ಸುಮ್ಮನಿರಲಾರದೆ ‘ಲೇ ಅಜ್ಜಿಯಮ್ಮ! ಕೋಳಿ ಕೇಳಿ ಕಾರ ಅರೆದಾರಲಾ ಮುದುಕಿ. ಕತ್ತು ಕೊಡೋದಷ್ಟೇ ನಿನ್ನ ಕೆಲಸ. ನೀನು ಇದೇ ಥರಾ ತೌಡು ಕುಟ್ಟಿಕ್ಯಂಡೇ ಇರಬೇಕು’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.