ADVERTISEMENT

ಚುರುಮುರಿ: ಯಜಮಾನಿಕೆ!

ಬಿ.ಎನ್.ಮಲ್ಲೇಶ್
Published 17 ಜೂನ್ 2021, 19:31 IST
Last Updated 17 ಜೂನ್ 2021, 19:31 IST
ಚುರುಮುರಿ
ಚುರುಮುರಿ   

‘ರೀ... ನಿಮಗೂ ವಯಸ್ಸಾತು, ಬೀಪಿ, ಶುಗರ‍್ರು ಬಂದಿದೆ, ಓಡಾಡೋದು ಕಷ್ಟ... ಮನಿ ಯಜಮಾನಿಕಿ ನನಗೆ ಬಿಟ್ಟುಕೊಡಿ...’ ಮಡದಿ ಬೆಳ್ಳಂಬೆಳಿಗ್ಗೆ ಕಾಫಿ ಕೊಡುತ್ತಾ ಹೊಸ ಪ್ರಸ್ತಾವ ಮುಂದಿಟ್ಟಾಗ ನಗು ಬಂತು. ರಾಜ್ಯ ನಾಯಕತ್ವ ಬದಲಾವಣೆ ಚರ್ಚೆಯ ಪ್ರಭಾವ ಇದು ಎಂದು ಅರ್ಥವಾಯಿತು.

‘ಅಲ್ವೇ, ನಂಗೇನೋ ವಯಸ್ಸಾಯ್ತು, ನಿಂಗಾಗಿಲ್ವ? ಮದ್ವೆ ಆದಾಗ ಜಿಂಕೆ ತರ ಇದ್ದೆ, ಈಗ ಗಜಗಮನೆ ಆಗಿದೀಯ? ಮೊದ್ಲೆಲ್ಲ ನಿನ್ಮೇಲೆ ಕವಿತೆ ಬರೀತಿದ್ದೆ, ಈಗ ಕಾದಂಬರಿನೇ ಬರಿಯೋ ಥರ ಆಗಿದೀಯ?’ ಎಂದೆ ನಗುತ್ತ.

‘ಅದೆಲ್ಲ ಗೊತ್ತಿಲ್ಲ, ಇನ್ನೂ ಎಷ್ಟು ವರ್ಷ ನೀವೇ ಯಜಮಾನಿಕಿ ನಡೆಸಬೇಕು? ನಾವು ಬರೀ ಮನೆ ಕೆಲಸ ಮಾಡೋಕಿರೋದಾ?’

ADVERTISEMENT

‘ಎರಡು ವರ್ಷ ತಡಿ, ನಂಗೂ ರಿಟೈರ‍್ಡ್‌ ಆಗುತ್ತೆ... ಆಮೇಲೆ ನೀನೇ ಮನೆ ಯಜಮಾನಿ... ಆಯ್ತಾ?’

‘ಈಗ ಒಳ್ಳೆ ಸಂಬಳ ಬರೋ ಟೈಮ್ ಬಿಟ್ಟು ಪೆನ್ಷನ್‌ ಬರೋವಾಗ ಮನೆ ಯಜಮಾನಿಕೆ ತಗಂಡ್ರೆ ಏನ್ ಪ್ರಯೋಜನ?’

‘ಅಂದ್ರೆ... ನಿಂಗೆ ನನ್ನ ಸಂಬಳದ ಮೇಲೆ ಕಣ್ಣು. ಅದನ್ನ ನಿನ್ ಕೈಗೆ ತಂದುಕೊಟ್ಟು ನಾನು ಕೈ ಕಟ್ಕೊಂಡ್ ನಿಂತ್ಕೊಬೇಕಾ?’

‘ಏನಾದ್ರು ಅಂದ್ಕೊಳ್ಳಿ, ನೀವು ಯಜಮಾನಿಕೆ ಕೊಡದಿದ್ರೆ ನಾನು ತವರುಮನಿಗೆ ಹೋಗ್ತೀನಿ...’

‘ಅತೃಪ್ತ ಶಾಸಕರು ಡೆಲ್ಲಿಗೆ ಹೋದಂಗೆ ನನ್ನ ಹೆದರಿಸ್ತೀಯಲ್ಲೆ? ಈ ವಯಸ್ಸಲ್ಲಿ ತವರುಮನಿಗೋದ್ರೆ ನಿಂಗೆ ಮರ್ಯಾದೆ ಇರುತ್ತಾ?’

‘ಹಂಗಿದ್ರೆ ಯಜಮಾನಿಕಿ ಬಿಟ್ಟುಕೊಡಿ’.

‘ ಆಯ್ತು ಬಿಟ್ಟುಕೊಡೋಣ, ನೀನು ಮನಿ ಯಜಮಾನಿ ಆದ್ರೂ ನಾನು ನಿನ್ನ ಯಜಮಾನ ಅನ್ನೋದು ಬದಲಾಗಲ್ವಲ್ಲ ಅದಕ್ಕೇನ್ಮಾಡ್ತಿ?’

ಮಡದಿ ಸರ‍್ರನೆ ಕಾಫಿ ಕಪ್ ಎತ್ತಿಕೊಂಡು ಗುರ‍್ರನೆ ಅಡುಗೆ ಮನೆಗೆ ಹೋದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.