ADVERTISEMENT

ಚುರುಮುರಿ | ಚೀನಾ ಹಿಂದೆ ಹಾಕಿ...

ಸುಮಂಗಲಾ
Published 22 ಜೂನ್ 2020, 17:07 IST
Last Updated 22 ಜೂನ್ 2020, 17:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಕ್ಕಣ್ಣನದು ಒಂದೇ ವರಾತ, ಮೊಬೈಲ್ ಕೊಡು ಅಂತ. ‘ನಿನಗೆದಕ್ಕೆ ಬೇಕಲೇ, ಆನ್‍ಲೈನ್ ಮೀಟಿಂಗ್ ಐತೇನ್’ ಅಂದರೂ ಕೇಳಲಿಲ್ಲ. ‘ನೀ ಚೈನಾ ಆ್ಯಪ್ ಏನರ ಹಾಕ್ಕೊಂಡಿದ್ದರೆ ಡಿಲೀಟ್ ಮಾಡ್ತೀನಿ’ ಎಂದಿತು. ‘ಏನಿಲ್ಲ, ಹೋಗಲೇ’ ಎಂದು ಬೆದರಿಸಿದೆ. ಅರೆಕ್ಷಣ ಸುಮ್ಮನಿದ್ದು ‘ಚೈನೀಸ್ ನ್ಯೂಡಲ್ಸ್, ಚೈನೀಸ್ ಸೂಪ್ ಇಂಥವೆಲ್ಲ ತಿನ್ನಬ್ಯಾಡ’ ಅಂದಿತು. ‘ಅವಲಕ್ಕಿ, ಉಪ್ಪಿಟ್ಟಿನ ರವಾ ಸಿಕ್ಕರೆ ಸಾಕಾಗೈತಿ, ಅವ್ನೆಲ್ಲ ಎಲ್ ತರಾಕೆ ಹೋಗ್ಲಿ’ ಎಂದು ಬೈದೆ.

‘ಅವ್ರು ಹೆಂಗ ನಮ್ಮ ಸೈನಿಕರನ್ನ ಕೊಂದಾರ... ಅದಕ್ಕ ಮೋದಿ ಮಾಮಾ ಹೇಳ್ಯಾರ, ಚೈನಾ ಮೇಡ್‌ಗೆ ಬಹಿಷ್ಕಾರ ಹಾಕಿ, ಬರೇ ಇಂಡಿಯಾ ಮೇಡ್ ಅಷ್ಟೇ ಬಳಸ್ರೀ ಅಂತ’.

‘ನಿಮ್ಮ ಮೋದಿ ಮಾಮಾ ಮೊನ್ನಿ ಸರ್ವಪಕ್ಷ ಸಭಾದಾಗ ಯಾರೂ ನಮ್ಮ ಗಡಿವಳಗ ಬಂದಿಲ್ಲ ಅಂದಾರಂತ. ಗೊತ್ತೈತಿಲ್ಲೋ,ಯಾವ ಪ್ರಧಾನಿ, ಮುಖ್ಯಮಂತ್ರಿನೂ ನಿಮ್ಮ ಮೋದಿ ಮಾಮಾನಷ್ಟು ಚೀನಾಗೆ ಭೇಟಿ ಕೊಟ್ಟಿರಲಿಲ್ಲ, ಒಟ್ ಒಂಬತ್ತು ಸಲ ಹೋಗಿಬಂದರೂ, ಗಡಿ ಸಮಸ್ಯೆ ಬಗೆಹರಿಸಿಕೊಳ್ಳಾಕ ಎದಕ್ಕ ಆಗಿಲ್ಲ’ ನಾನು ಕಿಚಾಯಿಸಿದೆ.

ADVERTISEMENT

‘ಮೋದಿ ಮಾಮಾ ಹೇಳಿದ್ದು ಗಡಿವಳಗ ಬಂದಿಲ್ಲ, ಆ ಕಡಿಯಿಂದ ಈ ಕಡಿಗೆ ಬರಾಕ ಕಾಲೆತ್ತಿ ಸಜ್ಜಾದವ್ರನ್ನ ನಮ್ಮವ್ರು ತಡಿಯೂ ವೇಳೆ ಎರಡೂ ಕಡಿ ಸೈನಿಕರು ಸತ್ತಾರ ಅಂತ. ಇಷ್ಟ್ ಸಲ ಹೋಗಿದ್ದಕ್ಕೇ, ಚೀನಾ ಇಷ್ಟರ ಬಾಲಮುಚ್ಚಿಕೊಂಡೈತಿ’ಜೋರಾಗಿ ವಾದಿಸಿತು.

‘ಮೊದ್ಲು ಈ ಚೀನಾ ವೈರಸ್ಸಿಂದ ಬಚಾವಾದ್ರ ಸಾಕೇಗೇತಿ’.

‘ನಾವೇನ್ ಅವ್ರಿಗಿಂತ ಅಷ್ಟ್ ಹಿಂದುಳಿದಿಲ್ಲ. ಅವರದ್ದು ಸುಮಾರು 144 ಕೋಟಿ, ನಮ್ಮದು 138 ಕೋಟಿ, ಆರು ಕೋಟಿ ವ್ಯತ್ಯಾಸ ಅಷ್ಟೇ... ಒಂದ್ ವರ್ಸದಾಗೆ ನಾವ್ ಅವ್ರಿನ್ನ ಹಿಂದ್ ಹಾಕ್ತೀವಿ’ ಲ್ಯಾಪ್ಟಾಪಿನಲ್ಲಿ ಏನೋ ಓದುತ್ತ, ಹಿಗ್ಗಿನಿಂದ ಕುಣಿಯಿತು. ‘ಮಂಗ್ಯಾನಂಥವ್ನೆ... ಅದೇನ್ ಅಂಕಿಅಂಶ ಅಂತ ಸರಿಯಾಗಿ ನೋಡ್. ಜನಸಂಖ್ಯೆ ಅದು...’ ಬೈದೆ.

ಬಿದ್ದರೂ ಮೀಸೆಮಣ್ಣಾಗಲಿಲ್ಲವೆಂದು ವಾದಿಸುವ ಭಕ್ತಗಣದಂತೆ ‘ಅಂದ್ರ ನಾವೇ ನಂಬರ್ ವನ್ ಯುವಶಕ್ತಿ, ಯುವ ಸಂಪನ್ಮೂಲ’ ಎಂದು ವಿತಂಡವಾದ ಹೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.