ADVERTISEMENT

ಚುರುಮುರಿ: ಒನ್‌ ಫ್ಯಾಮಿಲಿ ಒನ್‌ ಪಾರ್ಟಿ! 

ಗುರು ಪಿ.ಎಸ್‌
Published 18 ಡಿಸೆಂಬರ್ 2024, 22:22 IST
Last Updated 18 ಡಿಸೆಂಬರ್ 2024, 22:22 IST
ಚುರುಮುರಿ
ಚುರುಮುರಿ   

‘ ರೀ… ಮುಂದಿನ ವಾರ ಏನಿದೆ ಗೊತ್ತಾ?’ ಕೇಳಿದಳು ಹೆಂಡತಿ. 

‘ಏನು’ ಎಂದೆ ಗಂಭೀರವಾಗಿ. 

‘ಮುಂದಿನ ವಾರ ನಮ್‌ ಮದುವೆ ಆ್ಯನಿವರ್ಸರಿ, ಮುಂದಿನ ತಿಂಗಳ ಮೊದಲನೇ ವಾರದಲ್ಲಿ ದೊಡ್ಡ ಮಗಳು, ಎರಡನೇ ವಾರದಲ್ಲಿ ಸಣ್ಣ ಮಗಳ ಬರ್ತ್‌ಡೇ’ ವರದಿ ಓದಿದಳು.

ADVERTISEMENT

ಏನೂ ಮಾತನಾಡದೆ ನ್ಯೂಸ್‌ಪೇಪರ್‌ ಓದುವುದರಲ್ಲಿ ಮಗ್ನನಾದೆ. 

‘ಇನ್ನೆರಡೇ ತಿಂಗಳಲ್ಲಿ ನಿಮ್‌ ಬರ್ತ್‌ಡೇನೂ ಬಂದ್‌ಬಿಡುತ್ತೆ ರೀ…’ ಹೆಂಡತಿಯ ಮಾತು ಮುಂದುವರಿದೇ ಇತ್ತು.

‘ನೋಡಿಲ್ಲಿ, ಕೇಂದ್ರ ಸರ್ಕಾರ ‘ಒನ್‌ ನೇಷನ್, ಒನ್‌ ಎಲೆಕ್ಷನ್‌’ ಮಸೂದೆ ಮಂಡಿಸಿದೆ’. 

‘ನಾನೇನೋ ಹೇಳ್ತಿದ್ರೆ ನೀವೇನೋ ಹೇಳ್ತೀರಲ್ರೀ’.

‘ಈ ಸುದ್ದಿ ಓದಿ, ನನಗೂ ಒಂದು ಐಡಿಯಾ ಬಂತು’. 

‘ಏನದು?’ 

‘ಒಬ್ಬೊಬ್ಬರ ಬರ್ತ್‌ಡೇಗೆ ಒಮ್ಮೊಮ್ಮೆ ಹೊಸ ಬಟ್ಟೆ ತರೋದು, ಕೇಕ್‌ ಕಟ್‌ ಮಾಡೋದು, ಪದೇ ಪದೇ ಪಾರ್ಟಿ ಮಾಡೋದಕ್ಕಿಂತ ‘ಒನ್‌ ಫ್ಯಾಮಿಲಿ, ಒನ್‌ ಪಾರ್ಟಿ’ ನಿಯಮ ಜಾರಿಗೆ ತಂದರೆ ಹೆಂಗೆ?’ ಎನ್ನುತ್ತಾ ಉತ್ಸಾಹದಲ್ಲಿ ಎಲ್ಲರ ಮುಖ ನೋಡಿದೆ.

ನನ್ನ ಯೋಚನೆಗೆ ಯಾರಿಂದಲೂ ಮೆಚ್ಚುಗೆ ವ್ಯಕ್ತವಾಗಲಿಲ್ಲ, ಸಿಟ್ಟಿನಲ್ಲಿ ಮುಖ ನೋಡಿದರು ಮಕ್ಕಳು!

‘ಸರಿಯಾಗಿ ಅಭಿವೃದ್ಧಿ ಕೆಲಸ ಅಂತೂ ಮಾಡಲ್ಲ. ನೀವು ದುಡ್ಡು ಬಿಚ್ಚೋದೇ ಎಲೆಕ್ಷನ್‌ ಟೈಮ್‌ನಲ್ಲಿ. ಅದಕ್ಕೆ, ಆಗಾಗ ಚುನಾವಣೆ ನಡೀತಿದ್ರೆ ನಮ್ಮಂಥ ಕಾರ್ಯಕರ್ತರು ನಾಲ್ಕು ಕಾಸು ಮಾಡ್ಕೋತಾರೆ, ನೀವು ಅದಕ್ಕೂ ಕಲ್ಲು ಹಾಕಿದರೆ ಹೇಗೆ?’ ಫಂಕ್ಷನ್‌ ಹೆಸರಲ್ಲಿ ಅಷ್ಟಿಷ್ಟು ದುಡ್ಡು ಉಳಿಸಿಕೊಳ್ಳುತ್ತಿದ್ದ ಹೆಂಡತಿಯೂ ನಗುತ್ತಲೇ ತಿವಿದಳು.  

‘ವರ್ಷಕ್ಕೆ ಐದೈದು ಪಾರ್ಟಿ ಮಾಡಬೇಕೆಂದರೆ ಮತ್ತೊಂದು ಕಾನೂನು ಬರಬೇಕಷ್ಟೇ?’ 

‘ಯಾವ ಕಾನೂನು ರೀ?’ 

‘ಸೇಮ್‌ ಪ್ರೈವೇಟ್‌ ಜಾಬ್‌ಗೆ, ಸೇಮ್‌ ಸರ್ಕಾರಿ ಸ್ಯಾಲರಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.