ADVERTISEMENT

ಚುರುಮುರಿ| ಹಬ್ಬದ ಸೇವೆ

ಸಿ.ಎನ್.ರಾಜು
Published 30 ಮಾರ್ಚ್ 2022, 19:31 IST
Last Updated 30 ಮಾರ್ಚ್ 2022, 19:31 IST
.
.   

‘ಹಬ್ಬದಲ್ಲಿ ಇನ್ನೇನು ರಿಸ್ಕ್ ಇರುತ್ತೆ, ತೋರಣ ಕಟ್ಟಿ, ಹೂರಣ ಕುಟ್ಟಿ, ಒಬ್ಬಟ್ಟು ತಟ್ಟಿದರೆ ಯುಗಾದಿ ಮುಗಿಯುತ್ತದೆ...’ ಅಂದ ಗಿರಿ.

‘ಅಷ್ಟು ಈಸಿಯಲ್ಲಾರೀ, ಎಷ್ಟೊಂದು ಕೆಲ್ಸ ಇರುತ್ತವೆ ಗೊತ್ತಾ? ನೀವು ನನಗೆ ಹೆಲ್ಪ್ ಮಾಡಬೇಕು’ ಎಂದಳು ಅನು.

ಅಷ್ಟೊತ್ತಿಗೆ, ‘ನಮಸ್ಕಾರ ಮೇಡಂ...’ ಎನ್ನುತ್ತಾ ಬಂದ ಪುರುಷ, ಮಹಿಳೆ, ‘ನಾವು ಹಬ್ಬ ಆಚರಣಾ ಸಂಸ್ಥೆಯವರು, ನಿಮ್ಮ ಮನೆಯ ಹಬ್ಬಕ್ಕೆ ನಮ್ಮ ಸೇವೆ ಬಳಸಿಕೊಳ್ಳಿ’ ಎಂದರು.

ADVERTISEMENT

‘ಏನು ಸೇವೆ? ಮನೆ ಕ್ಲೀನ್ ಮಾಡಿಕೊಡ್ತೀರಾ?’ ಗಿರಿ ಕೇಳಿದ.

‘ಮಾಡ್ತೀವಿ. ಮನೆಯನ್ನು ಸಾರಿಸಿ, ಗುಡಿಸಿ ಅಲಂಕಾರ ಮಾಡ್ತೀವಿ, ಬಾಗಿಲಿಗೆ ತೋರಣ ಕಟ್ಟಿ, ಸುಂದರವಾಗಿ ರಂಗೋಲಿ ಹಾಕ್ತೀವಿ’ ಎಂದ ಆತ.

‘ಹಬ್ಬದ ಕೆಲಸ ಅಷ್ಟೇ ಅಲ್ಲ...’ ಅನು ಗೊಣಗಿದಳು.

‘ನೀರು ಕಾಯಿಸಿ ನಿಮ್ಮೆಲ್ಲರಿಗೂ ಎಣ್ಣೆಸ್ನಾನ ಮಾಡಿಸ್ತೀವಿ, ಮಕ್ಕಳಿಗೆ ಬಟ್ಟೆ ತೊಡಿಸಿ, ತಲೆ ಬಾಚಿ, ಪೌಡರ್ ಹಾಕಿ ಬೊಟ್ಟು ಇಡ್ತೀವಿ...’ ಎಂದಳು ಆಕೆ.

‘ನೀವೇ ಅಡುಗೆ ಮಾಡ್ತೀರಾ?’ ಗಿರಿ ಕೇಳಿದ.

‘ಮಾಡ್ತೀವಿ. ಪೂಜೆ ಮಾಡಿ, ಬೇವು ಬೆಲ್ಲ ಕೊಡ್ತೀವಿ, ಹಬ್ಬದ ಅಡುಗೆ ಮಾಡಿ ನಿಮಗೆ ಬಡಿಸ್ತೀವಿ. ಹಬ್ಬದ ದಿನ ನೀವು ಆರಾಮಾಗಿ, ಆನಂದವಾಗಿ ಇರಬಹುದು. ನಮಗೆ ಸರ್ವೀಸ್ ಚಾರ್ಜ್ ಕೊಟ್ಟರೆ ಸಾಕು’ ಎಂದ ಆತ.

‘ಹೌದೇ?!... ಬೇರೆ ಹಬ್ಬಗಳ ಆಚರಣೆಯ ಆರ್ಡರ್‌ಗಳನ್ನೂ ತಗೊಳ್ತೀರಾ?’ ಅನು ಕೇಳಿದಳು.

‘ಹೌದು, ಗಣೇಶ ಹಬ್ಬದಲ್ಲಿ ನಾವೇ ಗಣೇಶ ಮೂರ್ತಿ ತಂದು ಪ್ರತಿಷ್ಠಾಪಿಸಿ ಪೂಜೆ ಮಾಡಿ ನಿಮಗೆ ಪ್ರಸಾದ ಕೊಡ್ತೀವಿ. ದೀಪಾವಳಿಗೆ ಪಟಾಕಿ ತಂದು ಸುಡ್ತೀವಿ, ಸಿಹಿ ಅಡುಗೆ ಸಿದ್ಧಮಾಡಿ ಬಡಿಸ್ತೀವಿ. ನೀವು ಯಾವುದೇ ಹಬ್ಬದ ಸೇವೆಗಾಗಿ ಆರ್ಡರ್ ಮಾಡಬಹುದು, ನಿಮ್ಮ ಸೇವೆಗೆ ನಾವು ಸದಾ ಸಿದ್ಧ...’ ಎಂದು ಕರಪತ್ರ ಕೊಟ್ಟು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.